ನವ ದೆಹಲಿ: ಸುಪ್ರೀಂಕೋರ್ಟ್ ತನ್ನ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿ (Supreme Court) ನಡೆಸಿದ್ದ ಉನ್ನತ ಮಟ್ಟದ ಸಮಿತಿ ಸಭೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಈ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಕೊಲಿಜಿಯಂ ಸಭೆಯ ವಿವರಗಳನ್ನು ಬಹಿರಂಗೊಡಿಸಲು ಸಾಧ್ಯವಿಲ್ಲ. ಯಾವುದಾದರೂ ಮಹತ್ವದ ನಿರ್ಣಯವನ್ನು ಕೈಗೊಂಡರೆ ಮಾತ್ರ ತಿಳಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇಬ್ಬರು ನ್ಯಾಯಾಧೀಶರನ್ನು ನೇಮಕಗೊಳಿಸುವುದಕ್ಕೆ ಸಂಬಂಧಿಸಿ ಕೊಲಿಜಿಯಂ 2018ರ ಡಿಸೆಂಬರ್ 12ರಂದು ನಡೆಸಿದ್ದ ಸಭೆಯ ವಿವರಗಳನ್ನು ಕೋರಿ, ಅರ್ಜಿ ಸಲ್ಲಿಸಲಾಗಿತ್ತು. ಈ ಸಭೆಯ ವಿವರ ಬಹಿರಂಗಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರಧ್ವಾಜ್ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಅಂದು ನಡೆದ ಸಭೆಯಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್, ನಾಲ್ವರು ಹಿರಿಯ ನ್ಯಾಯಾಧೀಶರಾದ ಮದನ್ ಬಿ ಲೋಕೂರ್, ಎ,ಕೆ ಸಿಕ್ರಿ, ಎಸ್‌ಎ ಬೊಬ್ಡೆ, ಎನ್‌ವಿ ರಮಣ ಉಪಸ್ಥಿತರಿದ್ದರು. ಸಭೆಯ ವಿವರಗಳು ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರಲಿಲ್ಲ.