Site icon Vistara News

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Suresh Gopi

Suresh Gopi says reports of his resignation from the Council of Ministers are grossly incorrect

ತಿರುವನಂತಪುರಂ: ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್‌ ಗೋಪಿ (Suresh Gopi) ಅವರು ಕೇಂದ್ರ ಸಚಿವ ಸ್ಥಾನಕ್ಕೆ (Central Minister) ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸಚಿವನಾಗಿ ಇರುವುದಕ್ಕಿಂತ, ಸಂಸದನಾಗಿ ಕೆಲಸ ಮಾಡಲು ಅವರು ಬಯಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, ಸುರೇಶ್‌ ಗೋಪಿ ಅವರು ಮಹತ್ವದ ಸ್ಪಷ್ಟನೆ ನೀಡಿದ್ದು, “ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುವ ವರದಿಗಳು ಶುದ್ಧ ಸುಳ್ಳು” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

“ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ/ ಆದರೆ, ಇದು ಶುದ್ಧ ಸುಳ್ಳು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇರಳದ ಏಳಿಗೆಗೆ ಶ್ರಮಿಸುತ್ತೇನೆ” ಎಂಬುದಾಗಿ ಸುರೇಶ್‌ ಗೋಪಿ ಅವರು ಪೋಸ್ಟ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮೋದಿ 3.0 ಕ್ಯಾಬಿನೆಟ್​ನಲ್ಲಿ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಸುರೇಶ್ ಗೋಪಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುದ್ದೆಯಿಂದ ಮುಕ್ತರಾಗಲು ಮತ್ತು ತ್ರಿಶೂರ್ ಜನರಿಗಾಗಿ ಸಂಸದರಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳನ್ನು ಮುಗಿಸಲೇಬೇಕು ಎಂದು ಹೇಳಿದ್ದಾರೆ ಎಂಬುದಾಗಿ ವರದಿಯಾಗಿತ್ತು.

ಸಂಸದನಾಗಿ ಕೆಲಸ ಮಾಡುವುದು ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಮುಕ್ತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ. ತ್ರಿಶೂರ್ ಮತದಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅದು ತಿಳಿದಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ನನ್ನ ಚಲನಚಿತ್ರಗಳನ್ನು ಮುಗಿಸಬೇಕು ಎಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ದೆಹಲಿಯಲ್ಲಿ ಹೇಳಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು.

ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು. 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್​ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Suresh Gopi: ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿರುವ ಸುರೇಶ್‌ ಗೋಪಿ ಜೀವನದಲ್ಲಿ ನಡೆದಿತ್ತೊಂದು ಘೋರ ದುರಂತ

Exit mobile version