ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್ ಪಡೆಯುವುದೇ ಹರಸಾಹಸ. ಅದಕ್ಕೆ ನೂರಾರು ಮಾದರಿಯಲ್ಲಿ ಪ್ರಭಾವ ಬೀರಬೇಕು. ಸಿಕ್ಕಿ ಗೆದ್ದರಂತೂ ಆಕಾಶಕ್ಕೆ ಮೂರೇ ಗೇಣು. ಗೆದ್ದ ಮೇಲೆ ಸಚಿವ ಸ್ಥಾನ ದೊರೆತರೆ ಅದು ಅವರ ಜೀವನ ಅತ್ಯುನ್ನತ ಸಾಧನೆಯಾಗುತ್ತದೆ. ರಾಜಕಾರಣಿಗಳ ಪರಿಸ್ಥಿತಿ ಈ ರೀತಿ ಇದೆ ಎಂಬುದು ರಾಜಕಾರಣದಲ್ಲಿ ಇಲ್ಲದವರಿಗೂ ಗೊತ್ತಿರುವ ಸಂಗತಿ. ಇಂಥದ್ದರಲ್ಲಿ ಮೊದಲ ಪ್ರಯತ್ನದಲ್ಲೇ ಗೆದ್ದು ಸಚಿವ ಸ್ಥಾನ ದೊರೆತರೆ ಅದನ್ನು ಒಲ್ಲೆ ಎನ್ನುವುದುಂಟೆ? ಆದರೆ, ಅಚ್ಚರಿ ಎಂಬಂತೆ ಕೇರಳದ ತ್ರಿಶ್ಯೂರ್ ಸಂಸದ, ಸಿನಿಮಾ ನಟ ಸುರೇಶ್ ಗೋಪಿ (Suresh Gopi) ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೂ ಮೋದಿ 3.0 ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ. ನನಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಜವಾಬ್ದಾರಿ ಬೇಡ, ನಾನು ತ್ರಿಶ್ಯೂರ್ ಸಂಸದನಾಗಿಯೇ ಇರುತ್ತೇನೆ. ಅದಕ್ಕಿಂತಲೂ ಮಿಗಿಲಾಗಿ ನಾನು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಅದನ್ನು ಮುಗಿಸಬೇಕಾಗಿದೆ ಎಂದು ಹೇಳಿದ್ದಾರೆ.
BJP MP Suresh Gopi wants to quit Union ministry 'to act in movies'
— زماں (@Delhiite_) June 10, 2024
Thrissur MP Gopi Said: "I expect I will be relieved from the Union ministry. I have to finish my movies. Let the central leadership decide."
[ Manorama News ] pic.twitter.com/XFqHM05759
ಮೋದಿ 3.0 ಕ್ಯಾಬಿನೆಟ್ನಲ್ಲಿ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಸುರೇಶ್ ಗೋಪಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುದ್ದೆಯಿಂದ ಮುಕ್ತರಾಗಲು ಮತ್ತು ತ್ರಿಶೂರ್ ಜನರಿಗಾಗಿ ಸಂಸದರಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳನ್ನು ಮುಗಿಸಲೇಬೇಕು ಎಂದು ಹೇಳಿದ್ದಾರೆ.
ಸಂಸದನಾಗಿ ಕೆಲಸ ಮಾಡುವುದು ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಮುಕ್ತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ. ತ್ರಿಶೂರ್ ಮತದಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅದು ತಿಳಿದಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ನನ್ನ ಚಲನಚಿತ್ರಗಳನ್ನು ಮುಗಿಸಬೇಕು ಎಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ದೆಹಲಿಯಲ್ಲಿ ಮನೋರಮಾ ಜತೆ ಮಾತನಾಡಿದ ಸುರೇಶ್ ಗೋಪಿ ಹೇಳಿದ್ದಾರೆ.
ಸೋಮವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮೊದಲ ನಿಗದಿತ ಸಭೆಗೆ ಮುಂಚಿತವಾಗಿ ಗೋಪಿ ಅವರ ಹೇಳಿಕೆ ಬಂದಿದೆ. ಗೋಪಿ ಮತ್ತು ಪಕ್ಷದ ಹಿರಿಯ ನಾಯಕ ಜಾರ್ಜ್ ಕುರಿಯನ್ ಅವರು ಕೇರಳದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ: Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ
ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು.
2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.