Site icon Vistara News

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ; ಒಂದು ವಿಷಯಕ್ಕೆ ಅಚ್ಚರಿ ವ್ಯಕ್ತಪಡಿಸಿದ ಶರದ್ ಪವಾರ್​

Surprised over PM Modi giving religious slogans during election campaigning in Karnataka Says Sharad Pawar

#image_title

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ನಿಮಿತ್ತ ರಾಜ್ಯದಲ್ಲಿ ನಡೆಸಿದ ಚುನಾವಣಾ ಪ್ರಚಾರದ ಬಗ್ಗೆ ಎನ್​ಸಿಪಿ (ನ್ಯಾಶನಲಿಸ್ಟ್​ ಕಾಂಗ್ರೆಸ್ ಪಾರ್ಟಿ) ಅಧ್ಯಕ್ಷ ಶರದ್ ಪವಾರ್ (Sharad Pawar) ಮಾತನಾಡಿ, ಒಂದು ವಿಷಯದ ಬಗ್ಗೆ ನನಗೆ ತುಂಬ ಅಚ್ಚರಿಯಾಯಿತು ಎಂದು ಹೇಳಿದ್ದಾರೆ. ‘ಮೇ 10ರಂದು ವಿಧಾನಸಭಾ ಚುನಾವಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಭರದಿಂದ ಪ್ರಚಾರ ನಡೆಸಿದರು. ಆದರೆ ಅವರು ಪ್ರಚಾರದ ವೇಳೆ ಧಾರ್ಮಿಕ ಘೋಷಣೆಗಳನ್ನು (Religious Slogans)ಹೇಳುತ್ತಿರುವುದು ನನಗೆ ಅಚ್ಚರಿ ತರಿಸಿತು’ ಎಂದು ಶರದ್​ ಪವಾರ್ ಹೇಳಿದ್ದಾರೆ.

ಭಾನುವಾರ ಪಂಡರಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್​, ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಪ್ರತಿಪಾದಿಸಿದರು. ‘ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯದಲ್ಲಿ ನಾವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜಾತ್ಯತೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಮರೆತಂತೆ ಕಾಣುತ್ತಾರೆ. ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಹಲವು ಬಾರಿ ಧಾರ್ಮಿಕ ಘೋಷಣೆಗಳನ್ನು ಹೇಳಿದರು. ಹೀಗೆ ಧಾರ್ಮಿಕ ವಿಚಾರಗಳನ್ನು ಪ್ರಚಾರದ ವೇಳೆ ಪ್ರಸ್ತಾಪ ಮಾಡುವುದರಿಂದ ಹಲವು ತೊಂದರೆಯಾಗುತ್ತದೆ. ಸಮಾಜದಲ್ಲಿ ಭಿನ್ನ ವಾತಾವರಣ ಸೃಷ್ಟಿಸುತ್ತದೆ. ಇದು ಒಳ್ಳೆಯದಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Sharad Pawar: ಶರದ್‌ ಪವಾರ್‌ ಯುಟರ್ನ್‌, ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ತೀರ್ಮಾನ

ಶರದ್ ಪವಾರ್ ಅವರು ಇತ್ತೀಚೆಗೆ ಎನ್​ಸಿಪಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಮೇ 2ರಂದು ಅವರು ಈ ತೀರ್ಮಾನ ಪ್ರಕಟಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ವಿರೋಧಿಸಿದ್ದರು. ಇನ್ನಿತರ ಪದಾಧಿಕಾರಿಗಳೂ ರಾಜೀನಾಮೆ ನೀಡಲು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ, ಶರದ್ ಪವಾರ್ ರಾಜೀನಾಮೆಯನ್ನು ಎನ್​ಸಿಪಿ ಸಮಿತಿ ತಿರಸ್ಕರಿಸಿತ್ತು. ಹೀಗಾಗಿ ಅವರು ಮತ್ತೆ ಎನ್​ಸಿಪಿ ಅಧ್ಯಕ್ಷನ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.

Exit mobile version