ನವ ದೆಹಲಿ: ಇಲ್ಲಿನ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 68ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ(National Film Awards)ಗಳನ್ನು ಪ್ರದಾನ ಮಾಡಿದರು. ತಮಿಳು ನಟ ಸೂರ್ಯ ಹಾಗೂ ಹಿಂದಿ ನಟ ಅಜಯ್ ದೇವಗನ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕರ್ನಾಟಕದ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿತ ಸೂರೈ ಪೊಟ್ರು ಚಿತ್ರದ ನಟನೆಗಾಗಿ ಸೂರ್ಯ ಹಾಗೂ ತಾನ್ಹಾಜಿ-ದಿ ಅನಸಂಗ್ ವಾರಿಯರ್ ಚಿತ್ರದ ಅಭಿನಯಕ್ಕಾಗಿ ಅಜಯ್ ದೇವಗನ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಜಯ್ ದೇವಗನ್ ಅವರು ಮೂರನೇ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ. ಈ ಹಿಂದೆ ಝಕಮ್ ಮತ್ತು ಭಗತ್ ಸಿಂಗ್ ಚಿತ್ರದ ಅಭಿನಯಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಇನ್ನು ಸೂರೈ ಪೊಟ್ರು ಚಿತ್ರದಲ್ಲಿನ ಅಭಿನಯಕ್ಕಾಗಿ ಅಪರ್ಣಾ ಬಾಲಮುರಳಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಅತ್ಯುತ್ತಮ ಸ್ಕ್ರೀನ್ ಪ್ಲೇ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ ಹಾಗೂ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸೂರೈ ಪೊಟ್ರು ಪ್ರಶಸ್ತಿಯನ್ನು ಗೆದ್ದಿದೆ. ಸುಧಾ ಕೊಂಗರ ಪ್ರಸಾದ್ ಅವರು ಈ ಚಿತ್ರದ ನಿರ್ದೇಶಕಿ.