ಭೋಪಾಲ: ಶಂಕರಾಚಾರ್ಯರು ಸಾವಿರ ವರ್ಷಗಳ ಹಿಂದೆ ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಒಂದಾದ ದ್ವಾರಕಾ ಪೀಠದ ಶಂಕರಾಚಾರ್ಯರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ (Swami Swaroopananda Saraswati) ಅವರು ಭಾನುವಾರ ದೈವಾಧೀನರಾಗಿದ್ದಾರೆ. ಕೇವಲ ಒಂಬತ್ತನೇ ವಯಸ್ಸಿಗೆ ಮನೆ ತೊರೆದು, ವೇದಾಧ್ಯಯನ ನಡೆಸಿ, ಧರ್ಮ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. ಹಾಗಾಗಿಯೇ ಅವರನ್ನು ಕ್ರಾಂತಿಕಾರಿ ಸಂತ ಎಂದೇ ಕರೆಯಲಾಗುತ್ತಿತ್ತು. ಇಂತಹ ಕ್ರಾಂತಿಕಾರಿ ಸಂತರ ಜೀವನ, ಸಾಧನೆಯ ಕುರಿತ ಮಾಹಿತಿ ಇಲ್ಲಿದೆ.
ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವು
ಮಧ್ಯಪ್ರದೇಶದ ಸೆಯೋನಿ ಜಿಲ್ಲೆಯ ದಿಘೋರಿ ಗ್ರಾಮದಲ್ಲಿ ೧೯೨೪ರಲ್ಲಿ ಜನಿಸಿದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರಿಗೆ ಬಾಲ್ಯದಿಂದಲೂ ಅಧ್ಯಾತ್ಮ, ಹಿಂದೂ ಧರ್ಮದಲ್ಲಿ ಅತೀವ ಆಸಕ್ತಿಯಿತ್ತು. ಹಾಗಾಗಿ ಅವರು, ಒಂಬತ್ತನೇ ವಯಸ್ಸಿನಲ್ಲಿ ಮನೆ ತೊರೆದು, ಹಿಂದೂ ಧರ್ಮಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜಿತ್ರಿ ಮಠದ ಶಂಕರಾಚಾರ್ಯ ಬ್ರಹ್ಮಾನಂದ ಸರಸ್ವತಿ ಅವರ ಆಪ್ತ ಶಿಷ್ಯರಾಗಿದ್ದ ಇವರು ೧೯೪೧ರಿಂದ ೧೯೫೩ರವರೆಗೆ ಮಠದಲ್ಲಿ ಸೇವೆ ಸಲ್ಲಿಸಿದರು.
ಹಿಂದೂ ಧರ್ಮದ ಕುರಿತು, ಧರ್ಮ ಗ್ರಂಥಗಳ ಕುರಿತು ಅತೀವ ಆಸಕ್ತಿ ಹೊಂದಿದ ಕಾರಣ ಅವರು ಉತ್ತರ ಪ್ರದೇಶ ಕಾಶಿಗೂ ತೆರಳಿದರು. ಅಲ್ಲಿ, ಸ್ವಾಮಿ ಕರ್ಪತ್ರಿ ಮಹಾರಾಜ್ ಅವರ ಶಿಷ್ಯರಾಗಿ, ವೇದ ಸೇರಿ ಹಲವು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದರು. ೧೯೮೨ರಲ್ಲಿ ದ್ವಾರಕ ಪೀಠದ ಶಂಕರಾಚಾರ್ಯರಾಗಿ ಆಯ್ಕೆಯಾದ ಅವರು ಕೊನೆ ಉಸಿರಿರುವವರೆಗೆ ಧರ್ಮದ ಕಾರ್ಯದಲ್ಲಿ ತೊಡಗಿದ್ದರು.
ಕ್ವಿಟ್ ಇಂಡಿಯಾ ಚಳವಳಿ
ಅಧ್ಯಾತ್ಮ, ವೇದ, ಧರ್ಮದ ಜತೆಗೆ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕು, ನಾವು ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬೇಕು ಎಂಬುದು ಅವರ ತುಡಿತವಾಗಿತ್ತು. ಹಾಗಾಗಿಯೇ, ಅವರು ತಮ್ಮ ೧೯ನೇ ವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. ಅಲ್ಲದೆ, ಹೋರಾಟದಲ್ಲಿ ಭಾಗಿಯಾದ ಕಾರಣ ೧೫ ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದರು.
ರಾಜಕೀಯದಲ್ಲೂ ಆಸಕ್ತಿ
ರಾಜಕೀಯದಲ್ಲೂ ಸ್ವರೂಪಾನಂದ ಸರಸ್ವತಿ ಅವರಿಗೆ ಆಸಕ್ತಿ ಇತ್ತು. ಅವರು ರಾಮರಾಜ್ಯ ಪರಿಷತ್ ಪಕ್ಷದ ಅಧ್ಯಕ್ಷರೂ ಆಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಸ್ವಾಮೀಜಿ ಆಪ್ತರಾಗಿದ್ದರು. ಪಿಕೆ ಸಿನಿಮಾ ವಿಚಾರದಲ್ಲಿ ಅವರು ಸೆನ್ಸಾರ್ ಮಂಡಳಿ ವಿರುದ್ಧ ಹರಿಹಾಯ್ದಿದ್ದರು. ಇಸ್ಕಾನ್ ಸಹ ಸನಾತನ ಧರ್ಮದ ಭಾಗ ಎಂದಾಗ ಅದನ್ನು ಅವರು ವಿರೋಧಿಸಿದ್ದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ೩೭೦ನೇ ವಿಧಿ ರದ್ದುಗೊಳಿಸಬೇಕು ಎಂದೂ ಅವರು ಒತ್ತಾಯಿಸಿದ್ದರು.
ರಾಮಮಂದಿರ ಹೋರಾಟ
ಶ್ರೀರಾಮನ ಅನುಯಾಯಿಯಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬೇಕು ಎಂಬುದು ಅವರ ಅಚಲ ನಿಲುವಾಗಿತ್ತು. ಹಾಗೆಯೇ, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಂದಿರ ನಿರ್ಮಾಣ ಆರಂಭವಾದಾಗ ಅವರು ಜನರಿಂದ ಬಂಗಾರ ಸಂಗ್ರಹಿಸುವ ಅಭಿಯಾನ ಆರಂಭಿಸಿದ್ದರು.
ಇದನ್ನೂ ಓದಿ | Swami Swaroopanand | ರಾಮಮಂದಿರ ಹೋರಾಟದಲ್ಲಿ ಸಕ್ರಿಯರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ದೈವಾಧೀನ