Site icon Vistara News

Swati Maliwal: ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲೇ ಆಪ್‌ ಸಂಸದೆ ಸ್ವಾತಿ ಮೇಲೆ ಹಲ್ಲೆ!

Swati Maliwal

ನವದೆಹಲಿ: ರಾಜ್ಯಸಭೆ ಆಪ್‌ ಸದಸ್ಯೆ, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ (Swati Maliwal) ಅವರ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ನಿವಾಸದಲ್ಲಿಯೇ ಹಲ್ಲೆ ನಡೆದಿದೆ ಎಂದು ದೆಹಲಿ ಪೊಲೀಸರು (Delhi Police) ತಿಳಿಸಿದ್ದಾರೆ. “ದೆಹಲಿ ಮುಖ್ಯಮಂತ್ರಿ ನಿವಾಸದ ಸಿವಿಲ್‌ ಲೈನ್‌ನಿಂದಲೇ ಕರೆ ಬಂದಿದ್ದು, ಸ್ವಾತಿ ಮಾಲಿವಾಲ್‌ ಅವರ ಹೆಸರಿನಲ್ಲಿ ಹಲ್ಲೆ ಕುರಿತು ಮಾಹಿತಿ ನೀಡಲಾಗಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

“ಬೆಳಗ್ಗೆ 9.34ರ ಸುಮಾರಿಗೆ ಪಿಎಸ್‌ ಸಿವಿಲ್‌ ಲೈನ್‌ಗಳಿಂದ ಮೊದಲ ಕರೆ ಬಂತು. ಮಹಿಳೆಯೊಬ್ಬರು ಕರೆ ಮಾಡಿ, ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು. ಇದಾದ ಬಳಿಕ, ಸಂಸದೆ ಮಾಲಿವಾಲ್‌ ಅವರು ಸಿವಿಲ್‌ ಲೈನ್‌ಗೆ ಬಂದರು. ನಾನು ದೂರು ನೀಡುತ್ತೇನೆ ಎಂಬುದಾಗಿ ತಿಳಿಸಿದರು. ನಂತರ ಪೊಲೀಸರ ತಂಡವು ದೆಹಲಿ ಸಿಎಂ ನಿವಾಸದ ಬಳಿ ತೆರಳಿ ಸ್ವಾತಿ ಮಾಲಿವಾಲ್‌ ಅವರನ್ನು ಪೊಲೀಸ್‌ ಸ್ಟೇಷನ್‌ಗೆ ಕರೆದುಕೊಂಡು ಹೋದರು. ಶಿಷ್ಟಾಚಾರದ ಪ್ರಕಾರ ದೆಹಲಿ ಪೊಲೀಸರು ಅನುಮತಿ ಇಲ್ಲದೆ ದೆಹಲಿ ಸಿಎಂ ನಿವಾಸದೊಳಗೆ ಹೋಗುವಂತಿರಲಿಲ್ಲ. ಅದಕ್ಕಾಗಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಲಾಯಿತು” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಬೆಳಗ್ಗೆ ಎರಡು ಕರೆಗಳು ಬಂದಿದ್ದು, 9.30ರ ಸುಮಾರಿಗೆ ಬಂದ ಕರೆಯಲ್ಲಿ ದೆಹಲಿ ಸಿಎಂ ಅವರ ಆಪ್ತ ವೈಭವ್‌ ಕುಮಾರ್‌ ಅವರಿಂದಲೇ ಹಲ್ಲೆ ನಡೆಸಲಾಗಿದೆ” ಎಂಬ ಮಾಹಿತಿ ನೀಡಲಾಯಿತು ಎಂದಿದ್ದಾರೆ. ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವೈಭವ್‌ ಕುಮಾರ್‌ ಅವರು ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಇವರು ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಸ್ವಾತಿ ಮಾಲಿವಾಲ್‌ ಕರೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ವಾಗ್ದಾಳಿ

ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಾಗ್ದಾಳಿ ನಡೆಸಿದೆ. “ಆಮ್‌ ಆದ್ಮಿ ಪಕ್ಷದಲ್ಲಿ ನಾರಿ ಶಕ್ತಿಯು ಸುರಕ್ಷಿತವಾಗಿಲ್ಲ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಗೇ ದೆಹಲಿ ಸಿಎಂ ನಿವಾಸದಲ್ಲಿ ರಕ್ಷಣೆ ಇಲ್ಲದಿದ್ದರೆ, ಅವರ ಮೇಲೆ ಹಲ್ಲೆ ನಡೆಯುತ್ತದೆ ಎಂದಾದರೆ, ಸಾಮಾನ್ಯ ಜನರ ಪಾಡೇನು? ಇದರಿಂದಾಗಿ ಆಮ್‌ ಆದ್ಮಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಯಲಾಗಿದೆ” ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಟೀಕಿಸಿದ್ದಾರೆ. ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸ್ವಾತಿ ಮಾಲಿವಾಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Swati Maliwal: ತಂದೆಯಿಂದಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಹೇಳಿಕೆ

Exit mobile version