Site icon Vistara News

Sonia Gandhi: ಆರ್ಥಿಕವಾಗಿ ಕಾಂಗ್ರೆಸ್‌ ಮುಗಿಸಲು ಮೋದಿ ಪ್ರಯತ್ನ ಎಂದ ಸೋನಿಯಾ ಗಾಂಧಿ!

sonia gandhi

Systematic Effort By PM Narendra Modi To Cripple Congress Financially: Sonia Gandhi

ನವದೆಹಲಿ: ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ (Congress) ಹಲವು ಬ್ಯಾಂಕ್‌ ಖಾತೆಗಳನ್ನು ಆದಾಯ ತೆರಿಗೆ ಇಲಾಖೆಯು (Income Tax Department) ತಡೆ ಹಿಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಆರೋಪಿಸಿದ್ದಾರೆ. “ನರೇಂದ್ರ ಮೋದಿ ಅವರು ವಿತ್ತೀಯವಾಗಿ ಕಾಂಗ್ರೆಸ್‌ಅನ್ನು ಮಣಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ” ಎಂದು ಹೇಳಿದರು.

ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ನಡೆಸಿದರು. ಇದೇ ವೇಳೆ ಮಾತನಾಡಿದ ಸೋನಿಯಾ ಗಾಂಧಿ, “ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿಯಲಾಗಿದೆ. ಇದು ಗಂಭೀರವಾದ ಪ್ರಕರಣವಾಗಿದೆ. ಇದು ಕಾಂಗ್ರೆಸ್‌ಅನ್ನು ಮಾತ್ರ ಹತ್ತಿಕ್ಕುವ ಪ್ರಯತ್ನವಲ್ಲ, ಇಡೀ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುವ ಪ್ರಯತ್ನ. ವಿತ್ತೀಯವಾಗಿ ಕಾಂಗ್ರೆಸ್‌ಅನ್ನು ಮುಗಿಸಲು ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದ್ದಾರೆ. ಜನರಿಂದ ಸಂಗ್ರಹಿಸಿದ ಕಾಂಗ್ರೆಸ್‌ನ ಹಣವನ್ನು ತಡೆಹಿಡಿಯಲಾಗಿದೆ. ನಮ್ಮ ಪಕ್ಷದ ಬ್ಯಾಂಕ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲಾಗಿದೆ” ಎಂದು ದೂರಿದರು.

ರಾಹುಲ್‌ ಗಾಂಧಿ ವಾಗ್ದಾಳಿ

ರಾಹುಲ್‌ ಗಾಂಧಿ ಅವರು ಕೂಡ ಕಾಂಗ್ರೆಸ್‌ ಹಣಕಾಸು ಬಿಕ್ಕಟ್ಟಿನ ಕುರಿತು ಮಾತನಾಡಿದರು. “ಕಾಂಗ್ರೆಸ್‌ ಪಕ್ಷದ ಎಲ್ಲ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿಯಲಾಗಿದೆ. ನಾವೀಗ ಪ್ರಚಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಹೀಗೆ ಮಾಡಲಾಗಿದೆ. ನಮಗೆ ದಂಡ ವಿಧಿಸಲಾಗಿದೆ. ಹೀಗಿದ್ದರೂ, ಚುನಾವಣಾ ಆಯೋಗವು ಒಂದೇ ಒಂದು ಮಾತು ಆಡಿಲ್ಲ. ಚುನಾವಣೆಯಲ್ಲಿ ಹೋರಾಡುವ ಶಕ್ತಿಯನ್ನು ಈಗಾಗಲೇ ಕುಂದಿಸಲಾಗಿದೆ. ಈಗಾಗಲೇ ನಾವು ಒಂದು ತಿಂಗಳ ಅವಧಿಯನ್ನು ಕಳೆದುಕೊಂಡಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Shakti Row: ಹಿಂದುಗಳ ಭಾವನೆಗಳಿಗೆ ಧಕ್ಕೆ; ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ದೂರು

ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಹಲವು ಖಾತೆಗಳಿಗೆ ತಡೆಹಿಡಿದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದ ಹಲವು ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಐಟಿ ಇಲಾಖೆಯು ಹಣ ವಿತ್‌ಡ್ರಾ ಮಾಡಿದೆ. ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ರೂ. ಪಡೆಯಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version