ನವ ದೆಹಲಿ: ಆದಾಯ ತೆರಿಗೆ ಇಲಾಖೆ ಆಗಸ್ಟ್ 2ರಂದು ತಮಿಳುನಾಡಿನ ಹಲವು ಚಿತ್ರನಿರ್ಮಾಪಕರು, ಚಲನಚಿತ್ರ ವಿತರಕರು, ಬಂಡವಾಳದಾರರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ (I-T Raid in Kollywood) ಮಾಡಿತ್ತು. ಈ ರೇಡ್ ವೇಳೆ ಐಟಿ ಇಲಾಖೆ ಸುಮಾರು 200 ಕೋಟಿ ರೂಪಾಯಿ ಅಕ್ರಮ ಆದಾಯ ಪತ್ತೆ ಹಚ್ಚಿದೆ ಎಂದು ಸಿಬಿಡಿಟಿ (ನೇರ ತೆರಿಗೆಗಳ ಕೇಂದ್ರೀಯ ಮಂಡಳಿ) ತಿಳಿಸಿದೆ. ಅಷ್ಟೇ ಅಲ್ಲ, ಅಕ್ರಮವಾಗಿ ಹಣ ವರ್ಗಾವಣೆ, ಹೂಡಿಕೆಯಾಗಿದ್ದನ್ನು ದೃಢೀಕರಿಸುವ ದಾಖಲೆಗಳು, ಡಿಜಿಟಲ್ ಉಪಕರಣಗಳು ಪತ್ತೆಯಾಗಿವೆ. ಅಕ್ರಮ ವಹಿವಾಟು ನಡೆಯುತ್ತಿದ್ದ ಸ್ಥಳವನ್ನೂ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.
ಐಟಿ ಅಧಿಕಾರಿಗಳು ಮುಂಬೈ, ಚೆನ್ನೈ, ಮಧುರೈ, ಕೊಯಂಬತ್ತೂರ್ ಮತ್ತು ವೆಲ್ಲೋರ್ಗಳಲ್ಲಿನ ಸುಮಾರು 40 ಪ್ರದೇಶಗಳಲ್ಲಿ ಶೋಧ ನಡೆಸಿದ್ದರು. ಒಟ್ಟಾರೆಯಾಗಿ 200 ಕೋಟಿ ರೂಪಾಯಿ ಅಕ್ರಮ ಆದಾಯ ಪತ್ತೆಯಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ. ಹಾಗೇ, 26 ಕೋಟಿ ರೂಪಾಯಿಗಳಷ್ಟು ದಾಖಲೆಗಳೇ ಇಲ್ಲದ ನಗದು, ಮೂರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸಿಕ್ಕಿದ್ದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಂದಹಾಗೇ, ಐಟಿ ರೇಡ್ ಮಾಡಿದ್ದ ಒಟ್ಟು 40 ಸ್ಥಳಗಳಲ್ಲಿ, 20 ಜಾಗಗಳು ತಮಿಳು ಸಿನಿಮಾ ನಿರ್ಮಾಪಕ ಅನ್ಬು ಚೆಜಿಯಾನ್ಗೆ ಸೇರಿದ್ದೇ ಆಗಿದ್ದವು. ಈ ಚೆಜಿಯಾನ್ ತಮಿಳು ಚಿತ್ರರಂಗದಲ್ಲಿಯೇ ಅತ್ಯಂತ ಪ್ರಭಾವಿಯಾಗಿದ್ದಾರೆ.
ಚಿತ್ರ ನಿರ್ಮಾಣ ಹೌಸ್ಗಳಿಂದ ತೆರಿಗೆ ವಂಚನೆ ಆಗಿದ್ದು ಸ್ಪಷ್ಟವಾಗಿದೆ. ಚಿತ್ರ ಬಿಡುಗಡೆಯಾದ ಮೇಲೆ ಗಳಿಕೆಯಾದ ಹಣಕ್ಕೂ, ಖಾತಾ ಪುಸ್ತಕಗಳಲ್ಲಿ ತೋರಿಸಲಾದ ಲೆಕ್ಕಕ್ಕೂ ತಾಳೆಯಾಗುತ್ತಿಲ್ಲ. ಖಾತಾ ಪುಸ್ತಕದಲ್ಲಿ ತುಂಬ ಕಡಿಮೆ ಹಣ ತೋರಿಸಲಾಗಿದೆ. ವಿತರಕರು ಸಿಂಡಿಕೇಟ್ಗಳನ್ನು ರಚಿಸಿಕೊಂಡು, ಥಿಯೇಟರ್ ಕಲೆಕ್ಷನ್ಗಳ ನೈಜ ಮೊತ್ತವನ್ನು ಮರೆಮಾಚಿದ್ದು ಸ್ಪಷ್ಟವಾಗಿದೆ ಎಂದೂ ಸಿಬಿಡಿಟಿ ಮಾಹಿತಿ ನೀಡಿದೆ.
ಇದನ್ನೂ ಓದಿ: IT raid | ಎಂಜಿಎಂ ಗ್ರೂಪ್ ಮೇಲೆ ಐಟಿ ರೇಡ್, ಬೆಂಗಳೂರಿನ ಹಲವೆಡೆ ಸೇರಿ 50 ಕಡೆ ಶೋಧ