ನವದೆಹಲಿ: ದೇಶದ ಗಮನ ಸೆಳೆದಿರುವ ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇವೆ. ಒಂದೆಡೆ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ (India Bloc) ಬಿರುಕು ಮೂಡಿದರೆ, ಮತ್ತೊಂದೆಡೆ ಬಿಜೆಪಿಯು ಚುನಾವಣೆಗೆ ಸಿದ್ಧವಾಗುತ್ತಿದೆ. ಗುರುವಾರ (ಜನವರಿ 25) ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಇದರ ಬೆನ್ನಲ್ಲೇ, ಬಿಜೆಪಿಯು 2024ರ ಲೋಕಸಭೆ ಚುನಾವಣೆಗಾಗಿ ‘ಪ್ರಚಾರದ ಹಾಡು’ (Campaign Song) ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿಯೇ ಹಿಂದಿ ಹಾಡು ಬಿಡುಗಡೆ ಮಾಡಿದ್ದಾರೆ. ಈ ಹಾಡಿನ ವಿಡಿಯೊ ಈಗ ವೈರಲ್ ಆಗಿದೆ. “ನಾವು ಬರೀ ಕನಸು ಕಾಣುವುದಿಲ್ಲ, ಆ ಕನಸು ನನಸು ಮಾಡುತ್ತೇವೆ. ಇದೇ ಕಾರಣಕ್ಕಾಗಿ ಎಲ್ಲರೂ ಮೋದಿ ಅವರನ್ನೇ ಆಯ್ಕೆ ಮಾಡುತ್ತಾರೆ” ಎಂಬುದು ಹಾಡಿನ ಸಾರವಾಗಿದೆ. ಹಾಗೆಯೇ, ಹಾಡಿನ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
#WATCH | BJP launches new campaign for the upcoming Lok Sabha elections 2024 – ‘Modi ko chunte hain’ pic.twitter.com/bblzdEMDDY
— ANI (@ANI) January 25, 2024
“ನರೇಂದ್ರ ಮೋದಿ ಅವರು ದೇಶವನ್ನು ತಾಯಿ ಎಂದು ಭಾವಿಸಿದ್ದಾರೆ. ದೇಶದ ಜನರನ್ನು ದೇವರೆಂದು ಭಾವಿಸಿದ್ದಾರೆ. ಅವರು ಖ್ಯಾತಿಗೂ ಮೊದಲು ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಕಾರಣಕ್ಕಾಗಿ ದೇಶದ ಜನರು ಅವರ ಮಾತನ್ನು ಕೇಳುತ್ತಾರೆ. ದೇಶದ ಹೆಣ್ಣುಮಕ್ಕಳೀಗ ನಾಯಕಿಯರಾಗಿ ಹೊರಹೊಮ್ಮಿದ್ದಾರೆ. ಭ್ರಷ್ಟಾಚಾರಿಗಳು ಹೆದರಿ ಮೂಲೆ ಸೇರಿದ್ದಾರೆ. ನರೇಂದ್ರ ಮೋದಿ ಅವರು ನೆಲದ ಮೇಲೆ ಇದ್ದರೂ ಗುರಿ ಆಕಾಶಕ್ಕೆ (ಚಂದ್ರಯಾನ 3 ಮಿಷನ್ ಉಲ್ಲೇಖಿಸಿ) ಇದೆ. ಅವರು ಆಕಾಶವನ್ನು ತಲುಪಿದ್ದಾರೆ” ಎಂಬುದು ಹಾಡಿನ ಸಾಹಿತ್ಯದ ಆಶಯವಾಗಿದೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ ಬಳಿಕ ಮೋದಿ ಘೋಷಿಸಿದ ಯೋಜನೆಯಿಂದ 1 ಕೋಟಿ ಮನೆಗಳಿಗೆ ಲಾಭ!
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಬಿಡುಗಡೆ ಮಾಡುತ್ತಿರುವ ಎರಡನೇ ಹಾಡು ಇದಾಗಿದೆ. 2023ರ ಡಿಸೆಂಬರ್‌ನಲ್ಲೂ ಬಿಜೆಪಿಯು ಫಿರ್ ಆಯೇಗಾ ಮೋದಿ (ಮೋದಿ ಮತ್ತೆ ಗೆಲ್ತಾರೆ) ಎಂಬ ಆಶಯದಲ್ಲಿ ಹಾಡು ಬಿಡುಗಡೆ ಮಾಡಿತ್ತು. ಈಗ ಮತ್ತೊಂದು ಹಾಡಿನ ಮೂಲಕ ಜನರ ಗಮನ ಸೆಳೆಯಲು ಯತ್ನಿಸುತ್ತಿದೆ. ಬಿಜೆಪಿಗೆ ಸೆಡ್ಡು ಹೊಡೆಯಲೆಂದೇ ಇಂಡಿಯಾ ಮೈತ್ರಿಕೂಟ ರಚಿಸಲಾಗಿದ್ದು, ಸೀಟು ಹಂಚಿಕೆ ಮಾತ್ರ ಕಗ್ಗಂಟಾಗಿದೆ. ಇದೇ ಕಾರಣಕ್ಕೆ, ಮಮತಾ ಬ್ಯಾನರ್ಜಿ ಅವರ ಟಿಎಂಸಿಯು ಮೈತ್ರಿಕೂಟದಿಂದ ಹಿಂದೆ ಸರಿದಿದೆ. ಪಂಜಾಬ್‌ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಆಪ್ ತೀರ್ಮಾನಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ