ಆಗ್ರಾ: ಇತಿಹಾಸ ಪ್ರಸಿದ್ಧ ತಾಜ್ ಮಹಲ್ (Tajmahal) ಈಗ ವಿವಾದಕ್ಕೆ ಸಿಲುಕಿದೆ. ಅದು ನಿಜಕ್ಕೂ ಮಮ್ತಾಜ್‌ಗಾಗಿ ಕಟ್ಟಿದ ಪ್ರೇಮ ಸೌಧವೇ? ಅಥವಾ ಮೊಘಲರ ಕಾಲದಲ್ಲಿ ಶಿವಾಲಯವನ್ನು ಪರಿವರ್ತಿಸಿ ಕಟ್ಟಿದ ಕಟ್ಟಡವೇ ಎಂಬ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ತಾಜ್ ಮಹಲ್ ಒಳಗಿರುವ 22 ʻನಿಗೂಢʼ ಕೋಣೆಗಳ ಒಳಗೆ ಕಟ್ಟಡದ ನಿಜವಾದ ರಹಸ್ಯ ಅಡಗಿದೆ. ಹಾಗಾಗಿ ಅದನ್ನು ತೆರೆದು ತಪಾಸಣೆಗೆ ಅವಕಾಶ ನೀಡಬೇಕು ಎಂದು ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಆದರೆ, ಕೋರ್ಟ್ ಇದೆಲ್ಲ ಪ್ರಾಚ್ಯ ವಸ್ತು ಇಲಾಖೆಗೆ ಸಂಬಂಧಿಸಿದ ವಿಷಯ ಎಂದು ಹೇಳಿ ಕೈ ತೊಳೆದುಕೊಂಡಿತ್ತು.
ಇದರ ನಡುವೆಯೇ ಪ್ರಾಚ್ಯ ವಸ್ತು ಇಲಾಖೆ ಕಟ್ಟಡದೊಳಗಿನ ಯಾವುದೇ ಕೋಣೆಗಳನ್ನು ಶಾಶ್ವತವಾಗಿ ಮುಚ್ಚಲಾಗಿಲ್ಲ. ಇತ್ತೀಚೆಗಷ್ಟೇ ಕಾಯಕಲ್ಪಕ್ಕಾಗಿ ತೆರೆಯಲಾಗಿತ್ತು. ಅರ್ಜಿದಾರರು ಊಹಿಸಿರುವಂತೆ ಇಲ್ಲಿ ಯಾವುದೇ ರಹಸ್ಯಗಳಿಲ್ಲ ಎಂದು ಹೇಳಿತ್ತು.
ಇದೀಗ ಪ್ರಾಚ್ಯ ವಸ್ತು ಇಲಾಖೆ ತನ್ನದೇ ವೆಬ್‌ಸೈಟ್‌ನಲ್ಲಿ ಇಪ್ಪತ್ತೆರಡು ಕೋಣೆಗಳ ಪೈಕಿ ಕೆಲವೊಂದು ಕೋಣೆಗಳ ಚಿತ್ರಗಳನ್ನು ಪ್ರಕಟಿಸಿದೆ. ʻʻಪ್ರಾಚ್ಯ ವಸ್ತು ಇಲಾಖೆಯ 2022ರ ನ್ಯೂಸ್‌ಲೆಟರ್‌ನಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಕೆಲವೊಂದು ಚಿತ್ರಗಳನ್ನು ಹಾಕಲಾಗಿದೆ. ಸಾರ್ವಜನಿಕರು ಮುಕ್ತವಾಗಿ ನೋಡಬಹುದುʼʼ ಎಂದು ಆಗ್ರಾದ ಪ್ರಾಚ್ಯ ವಸ್ತು ಇಲಾಖೆ ಮುಖ್ಯಸ್ಥ ಆರ್.ಕೆ. ಪಾಟೀಲ್ ಹೇಳಿದ್ದಾರೆ.
ಕಟ್ಟಡದ ನೆಲ ಮಾಳಿಗೆ ಮತ್ತು ಮೇಲಿನ ಮಹಡಿಗಳಲ್ಲಿರುವ, ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿರುವ ಈ ಕೋಣೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ತಪ್ಪು ಮಾಹಿತಿಯನ್ನು ದೂರೀಕರಿಸುವುದಕ್ಕಾಗಿ ಪ್ರಾಚ್ಯ ವಸ್ತು ಇಲಾಖೆ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ ಎಂದು ಮೂಲಗಳು ಹೇಳಿವೆ.
ಕಟ್ಟಡದ ಮುಚ್ಚಿದ ಕೋಣೆಗಳನ್ನು ತೆರೆದು ರಹಸ್ಯವನ್ನು ಬಯಲಿಗೆ ತರಲು ಅವಕಾಶ ನೀಡಬೇಕು ಎಂದು ಕೋರಿ ಡಾ. ರಜನೀಶ್ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದ ಬೆನ್ನಿಗೇ ಬಿಡುಗಡೆಯಾಗಿರುವ ಈ ಚಿತ್ರಗಳಲ್ಲಿ ಕೋಣೆಗಳ ಒಳಗೆ ಹಾಳಾಗಿರುವ ಭಾಗಗಳಿಗೆ ಕಾಯಕಲ್ಪ ಮಾಡಿರುವುದು ಕಂಡುಬರುತ್ತಿದೆ. ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ಈ ಕಾಯಕಲ್ಪ ಕೆಲಸ ನಡೆದಿದೆ ಎಂದು ವಿವರಣೆ ನೀಡಲಾಗಿದೆ.
ಸದ್ಯ ಬಗೆಹರಿಯಲ್ಲ TAJ MAHAL ಮುಚ್ಚಿದ ಕೋಣೆಗಳ ರಹಸ್ಯ, ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಎಲ್ಲೂ ಅರ್ಜಿದಾರರು ವಾದಿಸಿದಂತೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿವರಗಳು ಕಂಡುಬಂದಿಲ್ಲ ಎಂದು ಎಎಸ್‌ಐ ಹೇಳಿದೆ. ಎಎಸ್‌ಐ ಈ ಚಿತ್ರಗಳು, ಹೇಳಿಕೆಗಳು ನಿಜಕ್ಕೂ ಇದೊಂದು ಶಿವಾಲಯವೇ ಎಂದು ವಾದಿಸುತ್ತಿರುವ ವರ್ಗಕ್ಕೆ ಸಮಾಧಾನ ತರುವುದೇ ಎಂದು ಕಾದು ನೋಡಬೇಕಾಗಿದೆ. ದೇಶದಲ್ಲಿ ಹಲವಾರು ಮಸೀದಿಗಳ ಇತಿಹಾಸವನ್ನು ಕೆದಕಲಾಗುತ್ತಿದ್ದು, ವಾರಾಣಸಿಯ ಜ್ಞಾನವಾಪಿ ಮಸೀದಿಯ ವಿಡಿಯೊಗ್ರಫಿ ಸಮೀಕ್ಷೆ ಮಾಡಿಸುವಲ್ಲಿ ಹಿಂದೂ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಅಲ್ಲೂ ಈ ಹಿಂದೆ ಕೋರ್ಟ್ ಹಲವು ಬಾರಿ ಸಮೀಕ್ಷೆಗೆ ಒಪ್ಪಿಗೆ ಕೊಟ್ಟಿರಲಿಲ್ಲ. ಸುಮಾರು 30 ವರ್ಷಗಳ ನಿರಂತರ ಹೋರಾಟದ ಬಳಿಕ ನ್ಯಾಯಾಲಯವೇ ಸರ್ವೆಗೆ ಅವಕಾಶ ನೀಡಿದೆ. ಸಮೀಕ್ಷೆಯ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಮುಂದೆ ಇದು ಕೂಡಾ ಅಯೋಧ್ಯೆಯ ಮಾದರಿಯಲ್ಲೇ ಪುನರ್ ನಿರ್ಮಾಣವಾಗಲಿದೆ ಎಂಬ ಅಭಿಪ್ರಾಯ ದಟ್ಟವಾಗಿದೆ. ತಾಜ್ ಮಹಲ್ ಕೂಡಾ ಮುಂದಿನ ದಿನಗಳಲ್ಲಿ ಇದೇ ದಾರಿಯಲ್ಲಿ ಸಾಗಬಹುದು ಎಂಬ ಮಾತೂ ಇದೆ.
ತಾಜ್ ಬಗ್ಗೆ ಟ್ವೀಟ್ ಮಾಡಿದ ಮಸ್ಕ್ ಭಾರತಕ್ಕೆ ಭೇಟಿ ನೀಡಲಿದ್ದಾರೆಯೇ?
ಪ್ರವಾಸಿಗರ ದಂಡು
ತಾಜ್ ಮಹಲ್ ಕುರಿತ ವಿವಾದ, ಬಿಸಿಲ ಝಳದ ನಡುವೆಯೂ ತಾಜ್ ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ. ಶನಿವಾರ ಇಲ್ಲಿಗೆ 20000ಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಇವರಲ್ಲಿ 13,814 ಮಂದಿ ನೇರವಾಗಿ ಟಿಕೆಟ್ ಖರೀದಿಸಿದ್ದರೆ, 7154 ಮಂದಿ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರು.