ನವ ದೆಹಲಿ: ಚೀನಾ ಮತ್ತಿತರ ದೇಶಗಳಲ್ಲಿ ಒಮಿಕ್ರಾನ್ ಬಿಎಫ್.7 ತಳಿಯಿಂದಾಗಿ ಕೊರೊನಾ ವಿಪರೀತ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಆತಂಕ ಶುರುವಾಗಿದ್ದು, ಕೊರೊನಾ ಹಬ್ಬದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುತ್ತಿದೆ. ಇತ್ತೀಚೆಗಷ್ಟೇ ದೇಶದಲ್ಲಿ ಆರೋಗ್ಯ ಕ್ಷೇತ್ರದ ಪ್ರಮುಖರೊಂದಿಗೆ ಸಭೆ ನಡೆಸಿ, ಕೊರೊನಾ ಸ್ಥಿತಿಗತಿ ಬಗ್ಗೆ ವರದಿ ಪಡೆದಿದ್ದ ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಮತ್ತೊಂದು ಸಭೆ ನಡೆಸಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘ (IMA)ದ ಪ್ರಮುಖರು, ಹಲವು ಹಿರಿಯ ವೈದ್ಯರು, ಆರೋಗ್ಯ ತಜ್ಞರು ಪಾಲ್ಗೊಂಡಿದ್ದರು.
ದೇಶದ ಜನರು ಕೊವಿಡ್ 19 ಲಸಿಕೆಯ ಎರಡನೇ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಪ್ರಾರಂಭ ಮಾಡಬೇಕು. ಅವರಿಗೆ ಎರಡನೇ ಬೂಸ್ಟರ್ ಡೋಸ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಮನ್ಸುಖ್ ಮಾಂಡವಿಯಾ ಈ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ‘ಏಕಾಏಕಿ ಕೊರೊನಾ ಹೆಚ್ಚಳವಾಗಬಹುದಾದ ಸಾಧ್ಯತೆ ಇದ್ದು, ಅದರ ವಿರುದ್ಧ ವ್ಯವಸ್ಥಿತವಾಗಿ ಹೋರಾಡಲು ಮತ್ತು ಕೊರೊನಾ ಬಗ್ಗೆ ಮತ್ತು ಆಸ್ಪತ್ರೆ, ಔಷಧ ಮತ್ತಿತರ ವಿಷಯಗಳಲ್ಲಿ ಇಲ್ಲಸಲ್ಲದ ಸುಳ್ಳು ಸುದ್ದಿಗಳು ಹಬ್ಬದಂತೆ ನಿಯಂತ್ರಿಸಲು ಸದಾ ಸನ್ನದ್ಧರಾಗಿರಬೇಕು’ ಎಂದು ಆರೋಗ್ಯ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ತಜ್ಞರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: BF.7 Variant | ಉತ್ತರ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಕೇಸ್ ಪತ್ತೆ; ದುಬೈಗೆ ಹೊರಟಿದ್ದವನಿಗೆ ಕೋವಿಡ್ ಪಾಸಿಟಿವ್