ಹೈದ್ರಾಬಾದ್: ಸರ್ಕಾರಿ ಪ್ರಾಯೋಜಿತ ದ್ವೇಷವು ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ಯಲಿದೆ ಮತ್ತು ಭಾರತವು ಆಫಘಾನಿಸ್ತಾನದ ತಾಲಿಬಾನ್ ಆಡಳಿತವಾಗಿ ಬದಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರು ಹೇಳಿದ್ದಾರೆ. ಭಾರತೀ ಜನತಾ ಪಾರ್ಟಿ (BJP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಕೋಮು ಮತ್ತು ಜಾತಿಯಾಧರಿತ ದ್ವೇಷವನ್ನು ಹೆಚ್ಚಿಸುವ ಮೂಲಕ ದೇಶದ ಜನರನ್ನು ಒಡೆಯುತ್ತದೆ. ಇದರಿಂದ ದೇಶ ವಿನಾಶದತ್ತ ಸಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರವು ಅಭಿವೃದ್ಧಿ ಹೊಂದಲು ಮತ್ತು ಅದರ ಪರಿಣಾಮವಾಗಿ ರಾಜ್ಯಗಳು ಬೆಳೆಯಲು ಕೇಂದ್ರದಲ್ಲಿ ಪ್ರಗತಿಪರ ಮತ್ತು ನಿಷ್ಪಕ್ಷಪಾತ ಸರ್ಕಾರದ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಕೆಸಿಆರ್ ಒತ್ತಿ ಹೇಳಿದರು. ಎಲ್ಲಾ ನಾಗರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಜನರಿಗೆ ಶಾಂತಿ ಮತ್ತು ಸಾಮರಸ್ಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಲ್ಲದಿದ್ದರೆ, ನಾವು ಬಂಡವಾಳ ಹೂಡಿಕೆ ಕಳೆದುಕೊಳ್ಳಲಿದ್ದೇವೆ. ಕೈಗಾರಿಕೆಗಳು ಯುವಕರಿಗೆ ಉದ್ಯೋಗ ನೀಡಲು ಮುಂದಾಗದೇ ಇರಬಹುದು. ತೆಲಂಗಾಣವು ದೇಶದಕ್ಕೆ ಅಭಿವೃದ್ಧಿಯ ಪಥವನ್ನು ತೋರಿಸಿಕೊಡಲಿದೆ ಎಂದು ಹೇಳಿದರು. ಗುರುವಾರ ಮಹಬೂಬಾಬಾದ್ ಮತ್ತು ಕೊತಗುಡೆಂನಲ್ಲಿ ಸಮಗ್ರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯ ಒಡೆದಾಳುವ ರಾಜಕೀಯವನ್ನು ಮಾಡುತ್ತಿದೆ ಎಂದು ಆರೋಪಿಸಿ ಕೆಸಿಆರ್, ಬಿಜೆಪಿಯ ಈ ನೀತಿಯಿಂದ ರಾಜ್ಯಗಳ ನಡುವೆ ಜಲ ವಿವಾದಗಳು ಸೃಷ್ಟಿಯಾಗುತ್ತಿವೆ. ದೇಶದಲ್ಲಿ 70 ಸಾವಿರ ಟಿಎಂಸಿ ನೀರು ಲಭ್ಯವಿದ್ದರೂ, ಇದುವರೆಗೆ ನಾವು ಕೇವಲ 20 ಸಾವಿರ ಟಿಎಂಸಿ ನೀರು ಬಳಸಿಕೊಳ್ಳಲು ಮಾತ್ರವೇ ಸಾಧ್ಯವಾಗಿದೆ. ಕಳೆದ 75 ವರ್ಷಗಳಿಂದಲೂ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದರೆ, ತೆಲಂಗಾಣ ಮಾತ್ರವೇ ತನ್ನ ಜನರಿಗೆ ತಡೆರಹಿತ ಕುಡಿಯುವ ನೀರನ್ನು ತನ್ನ ಜನರಿಗೆ ಪೂರೈಸುತ್ತಿದೆ ಎಂದ ಹೇಳಿದರು.
ಇದನ್ನೂ ಓದಿ | MLAs Poaching Case | ಆಪರೇಷನ್ ಕಮಲ ಆರೋಪ, ಸಿಬಿಐ ತನಿಖೆಗೆ ಕೇಸ್ ವರ್ಗ, ತೆಲಂಗಾಣ ಸಿಎಂ ಕೆಸಿಆರ್‌ಗೆ ಹಿನ್ನಡೆ