ನವದೆಹಲಿ: ಚಾಟ್‌ಜಿಪಿಟಿಯ ಮಾತೃಸಂಸ್ಥೆಯಾದ ಓಪನ್‌ಎಐ (OpenAI) ಸಿಇಒ ಸ್ಯಾಮ್ ಅಲ್ಟ್‌ಮನ್ (Sam Altman) ಅವರು ಭಾರತ ಪ್ರವಾಸದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಭೇಟಿ, ಚರ್ಚೆಯ ವಿಷಯಗಳನ್ನು ಹರಡಿರುವ ಅವರು, ಭಾರತದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಅಳವಡಿಕೆ, ಕಾನೂನು ನಿಯಂತ್ರಣ ಸೇರಿ ಹಲವು ವಿಚಾರ ತಿಳಿಸಿದ್ದಾರೆ. ಹಾಗೆಯೇ, “ನರೇಂದ್ರ ಮೋದಿ ಅವರ ಉತ್ಸಾಹ ಅತ್ಯದ್ಭುತ” ಎಂದು ಬಣ್ಣಿಸಿದ್ದಾರೆ.
ಮೋದಿ ಭೇಟಿ ಕುರಿತು ಡಿಜಿಟಲ್ ಇಂಡಿಯಾ ಡೈಲಾಗ್ಸ್ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ಸ್ಯಾಮ್ ಅಲ್ಟ್‌ಮನ್ ಉತ್ತರಿಸಿದರು. “ನರೇಂದ್ರ ಮೋದಿ ಜತೆಗಿನ ಭೇಟಿಯು ಉತ್ತಮವಾಗಿತ್ತು. ನಿಜವಾಗಿಯೂ ಕುತೂಹಲದಿಂದ ಕೂಡಿತ್ತು. ಅವರ ಉತ್ಸಾಹ ಅತ್ಯದ್ಭುತವಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಅದರಿಂದ ಭಾರತದಲ್ಲಿ ಆಗುವ ಅನುಕೂಲಗಳ ಕುರಿತು ಚರ್ಚಿಸಿದೆ. ಹಾಗೆಯೇ, ಭಾರತದಲ್ಲಿ ಚಾಟ್‌ಜಿಪಿಟಿಗೆ ಇಷ್ಟೊಂದು ಸಕಾರಾತ್ಮಕ ಸ್ಪಂದನೆ ಸಿಗಲು ಕಾರಣ ಏನೆಂದು ಕೇಳಿದೆ. ಅದಕ್ಕೂ ಅವರ ಬಳಿ ಉತ್ತರವಿತ್ತು” ಎಂದು ತಿಳಿಸಿದರು.
ಎಐ ನಿಯಂತ್ರಣ ಅಗತ್ಯ
“ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಜಾಗತಿಕವಾಗಿ ನಿಯಂತ್ರಿಸುವ ಅಗತ್ಯವಿದೆ. ಈಗಾಗಲೇ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆಯ ಪರಿಣಾಮಗಳನ್ನು ನಾವು ನೋಡಿದ್ದೇವೆ. ಹಾಗಾಗಿ, ಇದನ್ನು ಜಾಗತಿಕ ಮಟ್ಟದಲ್ಲಿ ನಿಯಂತ್ರಣ ಮಾಡಬೇಕಿದೆ. ಇದನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚಿಸಲಾಯಿತು” ಎಂದು ಸ್ಯಾಮ್ ಅಲ್ಟ್‌ಮನ್ ಮಾಹಿತಿ ನೀಡಿದರು.
ಕೃತಕ ಬುದ್ಧಿಮತ್ತೆ ಆಧಾರಿತವಾಗಿಯೇ ಚಾಟ್‌ಜಿಪಿಟಿ ಕಾರ್ಯನಿರ್ವಹಿಸುತ್ತಿದೆ. ಚಾಟ್‌ಬಾಟ್ ಆಗಿರುವ ಇದು ಪ್ರಬಂಧ ಬರೆಯುವುದರಿಂದ ಹಿಡಿದು ಕೋಡಿಂಗ್‌ವರೆಗೆ ಎಲ್ಲ ಕ್ಷೇತ್ರಗಳಲ್ಲೂ ಅನುಕೂಲಕಾರಿಯಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ರೂಪಾಂತರದ ಕುರಿತು ಚರ್ಚೆಯಾಗುತ್ತಿದೆ. ಇದೇ ಕಾರಣಕ್ಕಾಗಿ, ಸ್ಯಾಮ್ ಅಲ್ಟ್‌ಮನ್ ಅವರು ಕೃತಕ ಬುದ್ಧಿಮತ್ತೆಯನ್ನು ಜಾಗತಿಕವಾಗಿ ನಿಯಂತ್ರಿಸುವ ಕುರಿತು ಮೊದಲಿನಿಂದಲೂ ಅಭಿಪ್ರಾಯ ತಿಳಿಸುತ್ತಲೇ ಇದ್ದಾರೆ.
ಇದನ್ನೂ ಓದಿ: Brand story : ಜಗತ್ತನ್ನೇ ದಂಗುಬಡಿಸಿದ ಚಾಟ್‌ಜಿಪಿಟಿ ಜನಕ ಓಪನ್‌ಎಐನಲ್ಲಿ ಇನ್ಫೋಸಿಸ್ ಹಣ ಹೂಡಿದ್ದೇಕೆ?!
ಭಾರತ ಪ್ರವಾಸದಲ್ಲಿರುವ ಸ್ಯಾಮ್ ಅಲ್ಟ್‌ಮನ್ ಅವರು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಹಾಗೆಯೇ, ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಏಳಿಗೆ ದಿಸೆಯಲ್ಲಿ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೂ ಅವರು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.