ಚೆನ್ನೈ, ತಮಿಳುನಾಡು: ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ವಿರುದ್ದ ಪಕ್ಷದೊಳಗೆ ಅಸಮಾಧಾನ ಎದ್ದಿದೆ. ಪರಿಣಾಮ ಏಕಕಾಲಕ್ಕೆ ತಮಿಳುನಾಡು ಬಿಜೆಪಿಯ 13 ಪದಾಧಿಕಾರಿಗಳು ಪಕ್ಷ ತೊರೆದು, ಮೈತ್ರಿ ಪಕ್ಷವಾಗಿರುವ ಎಐಎಡಿಎಂಕೆ(AIADMK) ಸೇರ್ಪಡೆಯಾಗಿದ್ದಾರೆ. ಹಾಗಾಗಿ, ಅಣ್ಣಾಮಲೈ ನಾಯಕತ್ವದ ವಿರುದ್ಧ ಅಪಸ್ವರಗಳು ಕೇಳಿ ಬರುತ್ತಿವೆ.
ಮೈತ್ರಿ ಪಕ್ಷವಾದ ಎಐಎಡಿಎಂಕೆ ಪಕ್ಷವನ್ನು ಸೇರ್ಪಡೆಯಾಗಿರುವವರು ಎಲ್ಲರೂ ಚೆನ್ನೈ ವೆಸ್ಟ್‌ನ ಬಿಜೆಪಿ ಐಟಿ ಸೆಲ್‌ನ ಪದಾಧಿಕಾರಿಗಳಾಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಘಟಕವು, ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ತಮ್ಮ ನಾಯಕರನ್ನು ಖರೀದಿಸುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಐಟಿ ಜಿಲ್ಲಾ ಅಧ್ಯಕ್ಷ ಅನ್ಬರಸನ್ ಅವರು, ಬಿಜೆಪಿಯಲ್ಲಿ ಕಳೆದ ಕೆಲವು ದಿನಗಳಿಂದ ಅಸಮರ್ಪಕ ಬೆಳವಣಿಗೆಗಳಾಗುತ್ತಿದ್ದು, ಅದಕ್ಕಾಗಿ ಪಕ್ಷ ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದೇನೆ. ನನ್ನ ಬಲ್ಲವರಿಗೆ ಗೊತ್ತು, ನಾನು ಯಾವುದೇ ಫಲದ ನಿರೀಕ್ಷೆ ಇಲ್ಲದೇ ಕೆಲಸ ಮಾಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಪಕ್ಷದೊಳಗಿನ ಅಸಾಮಾನ್ಯ ಪರಿಸ್ಥಿತಿಯನ್ನು ಪರಿಗಣಿಸಿ ನಾನು ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: CTR Nirmal Kumar: ಅಣ್ಣಾಮಲೈ ವಿರುದ್ಧ ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಬಂಡಾಯ, ಪಕ್ಷಕ್ಕೆ ರಾಜೀನಾಮೆ
ಇತ್ತೀಚಿನ ಕೆಲವು ದಿನಗಳಲ್ಲಿ ಬಿಜೆಪಿಯ ಸಾಕಷ್ಟು ನಾಯಕರು ಮತ್ತು ಕಾರ್ಯಕರ್ತರು ಪಕ್ಷವನ್ನು ತೊರೆದು, ಎಐಎಡಿಎಂಕೆಯನ್ನು ಸೇರ್ಪಡೆಯಾಗಿದ್ದಾರೆ. ಪಕ್ಷದೊಳಗೆ ಅಣ್ಣಾಮಲೈ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನವೂ ಇದೆ.