Site icon Vistara News

Sethusamudram Project | ಸೇತುಸಮುದ್ರಂ ಪ್ರಾಜೆಕ್ಟ್‌ಗೆ ತಮಿಳುನಾಡು ವಿಧಾನಸಭೆ ನಿರ್ಣಯ, ಬಿಜೆಪಿಯಿಂದಲೂ ಬೆಂಬಲ!

Tamil Nadu CM Stalin @ Sethusamudram Project

ಚೆನ್ನೈ: ಶ್ರೀಲಂಕಾವನ್ನು ಸುತ್ತುಬಳಸದೇ ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಸೇತುಸಮುದ್ರ ಪ್ರಾಜೆಕ್ಟ್‌‌ (Sethusamudram Project) ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಗುರುವಾರ ಅಂಗೀಕರಿಸಿದೆ. ಸಿಎಂ ಸ್ಟಾಲಿನ್ ಅವರು ಮಂಡಿಸಿದ ಈ ನಿರ್ಣಯಕ್ಕೆ, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಈ ಮೊದಲು ತಮಿಳುನಾಡು ಬಿಜೆಪಿ ಈ ಯೋಜನೆಯನ್ನು ವಿರೋಧಿಸಿಕೊಂಡು ಬಂದಿತ್ತು.

ಸೇತುಸಮುದ್ರ ಪ್ರಾಜೆಕ್ಟ್ ದಶಕಗಳಿಂದ ನನೆಗುದಿಗೆಗೆ ಬಿದ್ದಿದೆ. ಇದರಿಂದಾಗಿ ತಮಿಳುನಾಡಿನ ಸಮಗ್ರ ಅಭಿವೃದ್ಧಿ, ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ವಿಧಾನಸಭೆ ಅಂಗೀಕರಿಸಿರುವ ನಿರ್ಣಯದಲ್ಲಿ ತಿಳಿಸಲಾಗಿದೆ.

1860ರಲ್ಲೇ ಸೇತುಸಮುದ್ರಂ ಯೋಜನೆಗೆ ಬ್ರಿಟಿಷರು ಮುಂದಾಗಿದ್ದರು. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವುದು ಈ ಯೋಜನೆಯ ಗುರಿಯಾಗಿದೆ. ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ, ಹಡಗುಗಳು ಶ್ರೀಲಂಕಾವನ್ನು ಸುತ್ತಿಕೊಂಡು ಬರುವ ಪ್ರಮೇಯ ಬೀಳುವುದಿಲ್ಲ. ಇದರಿಂದಾಗಿ ಪ್ರಯಾಣ ಸಮಯ ಮತ್ತು ದೂರವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಆದರೆ, ಹಿಂದೂ ಸಂಘಟನೆಗಳು ಇದೊಂದು ಧಾರ್ಮಿಕ ತಾಣವಾಗಿದೆ. ರಾಮ ನಿರ್ಮಿಸಿದ ಸೇತುವೆಯಾಗಿದ್ದು, ಯೋಜನೆಯನ್ನು ಕೈಗೊಳ್ಳಬಾರದು ಎಂದು ಆಗ್ರಹಿಸಿದ್ದವು. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲೇ ಈ ಯೋಜನೆಗೆ ಹಸಿರುನಿಶಾನೆ ತೋರಿಸಲಾಗಿತ್ತು.

ಇದನ್ನೂ ಓದಿ | 686.406 ಚದರ ಕಿ.ಮೀ ಕಾಡನ್ನು ʼಕಾವೇರಿ ದಕ್ಷಿಣ ವನ್ಯಜೀವಿ ಧಾಮʼವೆಂದು ಘೋಷಿಸಿದ ತಮಿಳುನಾಡು ಸರ್ಕಾರ

Exit mobile version