ನವ ದೆಹಲಿ: ಕೊಯಮತ್ತೂರಿನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ (Coimbatore Blast) ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಭಯೋತ್ಪಾದನೆ ಲಿಂಕ್ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಭಾನುವಾರ ಕೊಯಮತ್ತೂರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜಮೀಜಾ ಮುಬಿನ್ ಎಂಬಾತ ಮೃತಪಟ್ಟಿದ್ದ. ಈತನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟಕ ಕೂಡ ಪತ್ತೆಯಾಗಿರವುರಿಂದ ಭಯೋತ್ಪಾದನೆ ಸಂಪರ್ಕದ ದಿಸೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2019ರಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಐಸಿಸ್ ಸಂಪರ್ಕದ ಸಂಬಂಧ ಇದೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದವು.
ಭಾನುವಾರ ಸಂಭವಿಸಿದ ಸಿಲಿಂಡರ್ ಸ್ಫೋಟ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದ್ದೇ ಅಥವಾ ಆಕಸ್ಮಿಕವಾಗಿ ಸಂಭವಿಸಿದ್ದೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಗಳಿಲ್ಲ. ಈ ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ಮನೆಯಿಂದ, ನಾಡ ಬಾಂಬ್ ತಯಾರಿಸಲು ಬೇಕಾದ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪುಡಿ ಮತ್ತು ಸಲ್ಫರ್ ಸೇರಿದ ಇನ್ನಿತರ ಕಚ್ಚಾವಸ್ತುಗಳನ್ನು ಪೊಲೀಸರು ಜಫ್ತಿ ಮಾಡಿದ್ದಾರೆ.
ಸ್ಫೋಟ ಸಂಭವಿಸುವ ಕೆಲವು ಗಂಟೆಗಳಿಗೆ ಮೊದಲು ಮುಬಿನ್ ಹಾಗೂ ಮತ್ತಿತರು ಅನುಮಾನಕ್ಕೆ ಎಡೆ ಮಾಡಿಕೊಡುವ ವಸ್ತುವನ್ನು ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯ ದೃಶ್ಯಗಳು ಈಗ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಬಿನ್ ಸಹವರ್ತಿಗಳನ್ನು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಗ್ಯಾಸ್ ಸಿಲಿಂಡರ್ ಸ್ಫೋಟವನ್ನು ತಮಿಳುನಾಡು ಬಿಜೆಪಿಯು ಭಯೋತ್ಪಾದನಾ ಕೃತ್ಯವಾಗಿದೆ ಎಂದು ಆರೋಪಿಸಿದ್ದು, ಐಸಿಸ್ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ. ಕೊಯಮತ್ತೂರು ಸಿಲಿಂಡರ್ ಸ್ಫೋಟ ಕೇವಲ ಸಿಲಿಂಡರ್ ಸ್ಫೋಟವಲ್ಲ, ಅದು ಭಯೋತ್ಪಾದನಾ ಕೃತ್ಯವಾಗಿದೆ. ತಮಿಳುನಾಡು ಮುಖ್ಯಮಂತ್ರಿಗಳು ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆಯೇ? ಸರ್ಕಾರವು ಈ ಮಾಹಿತಿಯನ್ನು 12 ಗಂಟೆಗಳಿಂದ ಮುಚ್ಚಿಟ್ಟಿದೆ. ಇದು ತಮಿಳುನಾಡು ಡಿಎಂಕೆ ಸರ್ಕಾರ ಮತ್ತು ಗುಪ್ತಚರ ದಳದ ಸಂಪೂರ್ಣ ವೈಫಲ್ಯ ಅಲ್ಲವೇ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ISIS terror | ಭಾರತದ ಯುವಕರಿಗೆ ತರಬೇತಿ ನೀಡುತ್ತಿದ್ದ ಐಸಿಸ್ ಉಗ್ರ ವಾರಾಣಸಿಯಲ್ಲಿ ಬಂಧನ