Site icon Vistara News

ತಮಿಳುನಾಡು ಸರ್ಕಾರ ಯು ಟರ್ನ್; ಮದುವೆಗಳಲ್ಲಿ ಮದ್ಯ ಸೇವನೆಗೆ ಇಲ್ಲ ಅವಕಾಶ!

sales

ಚೆನ್ನೈ, ತಮಿಳುನಾಡು: ಮದುವೆ ಸೇರಿದಂತೆ ಖಾಸಗಿ ಸಮಾರಂಭಗಳು, ಕಾರ್ಯಕ್ರಮಗಳು, ಪಾರ್ಟಿಗಳಲ್ಲಿ ಮದ್ಯ ಸಂಗ್ರಹ ಮತ್ತು ಸೇವನೆಗೆ ಅವಕಾಶ ಕಲ್ಪಿಸಿದ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಸರ್ಕಾರ ಉಲ್ಟಾ ಹೊಡೆದಿದೆ. ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದೆ. ಮದುವೆ ಮಂಟಪಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವ ಸರ್ಕಾರದ ವಿಶೇಷ ಪರವಾನಿಗೆ ನೀತಿಗೆ ಎಐಎಡಿಎಂಕೆ, ಬಿಜೆಪಿ ಮತ್ತು ಪಿಎಂಕೆ ಸೇರಿದಂತೆ ಹಲವು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಅಲ್ಲದೇ, 1981ರ ತಮಿಳುನಾಡು ಮದ್ಯ(ಲೈಸೆನ್ಸ್ ಮತ್ತು ಪರ್ಮಿಟ್) ನಿಯಮಗಳಿಗೆ ತರಲಾದ ತಿದ್ದುಪಡಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದವು.

ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯುತ್ ಮತ್ತು ಅಬಕಾರಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರು, ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗಳು, ಜಾಗತಿಕ ಹೂಡಿಕೆದಾರರು ಸಭೆಯಂಥ ಕಾರ್ಯಕ್ರಮಗಳಲ್ಲಿ ಮಾತ್ರ ಮದ್ಯ ಸಂಗ್ರಹ ಮತ್ತು ಸೇವನೆಗೆ ಅವಕಾಶ ಕಲ್ಪಿಸಲಾಗುವುದು. ಮದುವೆ ಹಾಲ್‌ಗಳಲ್ಲಿ ಮದ್ಯ ಸರ್ವ್ ಮಾಡುವುದಕ್ಕೆ ಸರ್ಕಾರ ಎಂದಿಗೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಮಿಳುನಾಡು ಸರ್ಕಾರವು ಈಗ ಹೊಸ ಆದೇಶವನ್ನು ಹೊರಡಿಸಿದೆ. ಇದರಲ್ಲಿ ಮನೆಯ ಕಾರ್ಯಕ್ರಮಗಳು, ಸಮಾರಂಭಗಳು, ಪಾರ್ಟಿಗಳು ಇತ್ಯಾದಿಗಳ ಸಮಯದಲ್ಲಿ ವಾಣಿಜ್ಯೇತರ ಆವರಣದಲ್ಲಿ ಮದ್ಯವನ್ನು ಒಂದು ಬಾರಿ ಸಂಗ್ರಹಿಸಲು ಮತ್ತು ಸರಬರಾಜು ಮಾಡಲು ವಿಶೇಷ ಪರವಾನಗಿಗಳನ್ನು ಒದಗಿಸುವ ಭಾಗವನ್ನು ಅಳಿಸಲಾಗಿದೆ.

ಈ ಮೊದಲು ಮಾರ್ಚ್ 18ರಂದು ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್‌ನಲ್ಲಿಅತಿಥಿಗಳು, ಸಂದರ್ಶಕರು ಮತ್ತು ಅಂತಾರಾಷ್ಟ್ರೀಯ/ರಾಷ್ಟ್ರೀಯ ಶೃಂಗಸಭೆಗಳು ಮತ್ತು ಈವೆಂಟ್‌ಗಳು, ಸಮ್ಮೇಳನಗಳು, ಆಚರಣೆಗಳು, ಉತ್ಸವಗಳು ಇತ್ಯಾದಿಗಳಲ್ಲಿ ಭಾಗವಹಿಸುವವರಿಗೆ ಮದ್ಯ ಹೊಂದಲು ಮತ್ತು ಸೇವೆಗಾಗಿ ವಿಶೇಷ ಪರವಾನಗಿಯನ್ನು ವಾರ್ಷಿಕ ನೋಂದಣಿ ಶುಲ್ಕ ಅಥವಾ ದೈನಂದಿನ ಶುಲ್ಕದ ಆಧಾರದ ಮೇಲೆ ಅನುಮತಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ: Dangerous Hooch | ಕಳ್ಳಬಟ್ಟಿ ಸಾರಾಯಿ ಕುಡಿದವರೇಕೆ ಸಾಯುತ್ತಾರೆ? ಇದು ಹೇಗೆ ಅಪಾಯಕಾರಿ?

ಈಗ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮಾವೇಶಗಳು, ಸಮಾವೇಶ ಕೇಂದ್ರಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಟಾಕೂಟಗಳನ್ನು ಆಯೋಜಿಸುವ ಸ್ಥಳಗಳು, ಕ್ರೀಡಾಂಗಣಗಳಲ್ಲಿ ನಡೆಯುವ ಶೃಂಗಸಭೆಗಳಿಗೆ ಮಾತ್ರವೇ ವಿಶೇಷ ಪರವಾನಗಿಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

Exit mobile version