Site icon Vistara News

Tamil Nadu | ರಾಜ್ಯಪಾಲರ ಪೊಂಗಲ್ ಆಮಂತ್ರಣ ಪತ್ರಿಕೆಯಲ್ಲಿ ‘ತಮಿಳುನಾಡು ಸರ್ಕಾರ’ ಮಾಯ!

R N Ravi

ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡಿಗೆ ತಮಿಳುನಾಡು ಎನ್ನುವುದಕ್ಕಿಂತ ತಮಿಳಗಂ ಎಂಬ ಹೆಸರು ಹೆಚ್ಚು ಸೂಕ್ತ ಎಂದು ಹೇಳಿ ವಿವಾದದ ಕಿಚ್ಚು ಹೊತ್ತಿಸಿದ್ದ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಈಗ ಮತ್ತೆ ಅಂಥದ್ದೇ ನಡೆಯನ್ನು ಅನುಸರಿಸಿದ್ದಾರೆ. ರಾಜಭವನದಲ್ಲಿ ನಡೆಯಲಿರುವ ಪೊಂಗಲ್ ಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲೂ ‘ತಮಿಳುನಾಡು ಸರ್ಕಾರ’ ಬದಲಿಗೆ ‘ತಮಿಳಗ ಆಳುನಾರ್’ ಎಂದು ಪ್ರಕಟಿಸಲಾಗಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿದೆ(Tamil Nadu).

ಇಷ್ಟು ಮಾತ್ರವಲ್ಲದೇ, ಆಮಂತ್ರಣ ಪತ್ರಿಕೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರದ ಲಾಂಛನವನ್ನು ಮುದ್ರಿಸಿಲ್ಲ. ಕೇವಲ ಭಾರತ ಸರ್ಕಾರದ ಲಾಂಛನವನ್ನು ಮಾತ್ರವೇ ಮುದ್ರಿಸಲಾಗಿದೆ. ಆಮಂತ್ರಣ ಪತ್ರಿಕೆಯು ತಮಿಳು ಭಾಷೆಯಲ್ಲಿಯಲ್ಲಿದೆ.

ತಮಿಳಗಂ ಹೆಸರು ಸೂಕ್ತ ಎಂಬ ಹೇಳಿಕೆಯನ್ನು ವಿರೋಧಿಸಿ ಸೋಮವಾರ ನಡೆದ ವಿಧಾನಮಂಡಳ ಅಧಿವೇಶನದ ವೇಳೆ ಡಿಎಂಕೆ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ರಾಜ್ಯಪಾಲರ ಭಾಷಣವನ್ನು ವಿರೋಧಿಸಿದ್ದವು. ಇಷ್ಟಾಗಿಯೂ, ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟು, ಅವರು ತಮ್ಮದೇ ಆದ ಭಾಷಣ ಓದಿದ್ದರು. ಇದರಿಂದಾಗಿ ಸಿಎಂ ಸ್ಟಾಲಿನ್ ಅವರು, ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರವೇ ಪರಿಗಣಿಸಬೇಕೆಂಬ ನಿರ್ಣಯಕ್ಕೆ ವಿಧಾನಸಭೆ ಒಪ್ಪಿಗೆ ನೀಡಿತ್ತು. ಆಗ, ಸಭೆ ಮಧ್ಯದಲ್ಲೇ ರಾಜ್ಯಪಾಲ ಆರ್ ಎನ್ ರವಿ ಹೊರ ನಡೆದಿದ್ದರು.

ತಮಿಳುನಾಡು, ತೆಲಂಗಾಣ ಮತ್ತು ಕೇರಳ ರಾಜ್ಯಪಾಲರು ಮತ್ತು ಅಲ್ಲಿನ ಚುನಾಯಿತ ಸರ್ಕಾರಗಳ ನಡುವೆ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಲೇ ಇದೆ. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ರಾಜಭವನ ಹಾಗೂ ಸಿಎಂ ಆಫೀಸ್ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತಲೆದೋರುತ್ತಿವೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿವೆ.

ಇದನ್ನೂ ಓದಿ | Thamizhagam | ತಮಿಳುನಾಡಿಗಿಂತ ತಮಿಳಗಂ ಹೆಚ್ಚು ಸೂಕ್ತ ಎಂದ ರಾಜ್ಯಪಾಲರ ವಿರುದ್ಧ ಆಕ್ರೋಶ

Exit mobile version