Site icon Vistara News

ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ 10 ವಿಧೇಯಕ ಹಿಂದಿರುಗಿಸಿದ ತಮಿಳು ನಾಡು ರಾಜ್ಯಪಾಲ!

Tamil Nadu Governor Returns 10 bills

ಚೆನ್ನೈ, ತಮಿಳುನಾಡು: ಎಐಎಡಿಎಂಕೆ (AIADMK) ಪಾಸು ಮಾಡಿದ್ದ ಎರಡು ವಿಧೇಯಕಗಳು (Bills) ಸೇರಿದಂತೆ 10 ವಿಧೇಯಕಗಳನ್ನು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ (Tamil Nadu Governor R N Ravi) ಅವರು ಅಸೆಂಬ್ಲಿಗೆ ವಾಪಸ್ ಮಾಡಿದ್ದಾರೆ. ಅನವಶ್ಯಕವಾಗಿ ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ ಮಾಡುತ್ತಿರುವ ತಮಿಳುನಾಡು ಮತ್ತು ಪಂಜಾಬ್ ರಾಜ್ಯಪಾಲರ (Punjab Governor) ವಿರುದ್ಧ ಹರಿಹಾಯ್ದಿದ್ದ ಸುಪ್ರೀಂ ಕೋರ್ಟ್(Supreme Court), ಬೆಂಕಿಯ ಜತೆ ಆಟವಾಡಬೇಡಿ ಎಂದು ಎಚ್ಚರಿಸಿತ್ತು. ಇದರ ಬೆನ್ನಲ್ಲೇ ತಮಿಳುನಾಡು ರಾಜ್ಯಪಾಲರು ತಮ್ಮ ಬಳಿ ಇದ್ದ ವಿಧೇಯಕಗಳನ್ನು ವಾಪಸ್ ಮಾಡಿದ್ದಾರೆ.

ವಿಧೇಯಕಗಳನ್ನು ಹಿಂದಿರುಗಿಸಿದ ಒಂದು ಗಂಟೆ ಬೆನ್ನಲ್ಲೇ ಸ್ಪೀಕರ್ ಎಂ ಅಪ್ಪಾವು ಅವರು ವಿಶೇಷ ವಿಧಾಸಭೆ ಅಧಿವೇಶನವನ್ನು ಕರೆದಿದ್ದಾರೆ. ಈ ಅಧಿವೇಶನದಲ್ಲಿ ಡಿಎಂಕೆ ಸರ್ಕಾರವು ಮತ್ತೆ ಅಂಕಿತಕ್ಕಾಗಿ ಅದೇ ವಿಧೇಯಕಗಳನ್ನು ರಾಜ್ಯಪಾಲರಿಗೆ ವಾಪಸ್ ಕಳುಹಿಸು ಸಾಧ್ಯತೆ ಇದೆ. ಹೀಗೆ ಎರಡನೇ ಬಾರಿಗೆ ಯಾವುದೇ ಬದಲಾವಣೆ ಇಲ್ಲದೇ ಕಳುಹಿಸಿದ ವಿಧೇಯಕಗಳನ್ನು ಯಾವುದೇ ತಕರಾರು ಇಲ್ಲದೇ ಅಂಕಿತ ಹಾಕಬೇಕಾಗುತ್ತದೆ.

ಬಿಜೆಪಿ ಸರ್ಕಾರದಿಂದ ನೇಮಕವಾಗಿರುವ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ ಮಾಡುತ್ತಿದ್ದಾರೆ. ಆ ಮೂಲಕ ಚುನಾಯಿತ ಸರ್ಕಾರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಡಿಎಂಕೆ ಸರ್ಕಾರವು, ಅಂಕಿತಕ್ಕೆ ಕಳುಹಿಸಲಾಯದ ವಿಧೇಯಕಗಳನ್ನು ಉದ್ದೇಶಪೂರ್ವಕವಾಗಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ. ಅವರ ಈ ಕ್ರಮವು “ಜನರ ಇಚ್ಛೆಗೆ ಧಕ್ಕೆ ತರುತ್ತಿವೆ” ಎಂದು ಹೇಳಿದರು ಎಂದು ಆರೋಪಿಸಿದ್ದರು.

ಬಾಕಿ ಉಳಿದಿರುವ ವಿಧೇಯಕಗಳ ಪೈಕಿ ಒಂದು ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಹಾಗೂ ಇನ್ನೊಂದು ಎಐಎಡಿಎಂಕೆ ಮಾಜಿ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದ ವಿಧೇಯಕಗಳಿವೆ.

ರವಿ ಅವರು ಈ ಹಿಂದೆ ನೀಟ್ ವಿನಾಯಿತಿ ವಿಧೇಯಕವನ್ನು ಬಹಳ ವಿಳಂಬದ ನಂತರ ಹಿಂದಿರುಗಿಸಿದ್ದರು. ಅಸೆಂಬ್ಲಿ ಮತ್ತೆ ವಿಧೇಯಕವನ್ನು ಅಂಗೀಕರಿಸಿದ ನಂತರವೇ ಅದನ್ನು ಭಾರತದ ರಾಷ್ಟ್ರಪತಿಗಳಿಗೆ ರವಾನಿಸಿದರು. ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸುವ ವಿಧೇಯಕದ ಬಗ್ಗೆ ಅವರು ಇದೇ ರೀತಿಯ ನಿಲುವನ್ನು ಪಡೆದರು.

ರಾಜ್ಯಪಾಲರಾಗಿ ರವಿ ಅವರು ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮ್ಮ ಭಾಷಣದಲ್ಲಿ ಬಿ ಆರ್ ಅಂಬೆಡ್ಕರ್, ಇವಿ ಪೆರಿಯಾರ್, ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಸಿ ಎನ್ ಅಣ್ಣಾದೊರೈ, ಕೆ ಕಾಮರಾಜ್, ಕೆ ಕರುಣಾನಿಧಿ ಅವರ ಕೊಡುಗೆಯನ್ನು ಹೆಸರಿಸಲು ನಿರಾಕರಿಸಿದ್ದರು. ಇದು ಕೂಡ ಆಗ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಕೇರಳ, ಪಂಜಾಬ್ ಸೇರಿದಂತೆ ಇನ್ನೂ ಕೆಲವು ರಾಜ್ಯಗಳ ರಾಜ್ಯಪಾಲರು ಮತ್ತು ಅಲ್ಲಿನ ಚುನಾಯಿತ ಸರ್ಕಾರಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಪಾಲರಾದ ಭನ್ವರಿಲಾಲ್ ಪುರೋಹಿತ್ ಅವರಿಗೆ ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು. ವಿತ್ತೀಯ ನಿರ್ವಹಣಾ ಮತ್ತು ಶಿಕ್ಷಣ ವಿಧೇಯಕ ಸೇರಿದಂತೆ 7 ವಿಧೇಯಕಗಳನ್ನು ಪಂಜಾಬ್ ರಾಜ್ಯಪಾಲರ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ ಎಂದು ಅಭಿಷೇಕ ಸಿಂಘ್ವಿ ಅವರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

ಈ ಸುದ್ದಿಯನ್ನೂ ಓದಿ: Supreme Court: ಬೆಂಕಿಯೊಂದಿಗೆ ಆಟ ಬೇಡ! ಪಂಜಾಬ್, ತಮಿಳು ನಾಡು ರಾಜ್ಯಪಾಲರ ವಿರುದ್ಧ ಕೋರ್ಟ್ ಕೆಂಡ

Exit mobile version