ಚೆನ್ನೈ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡಿನ (Tamil Nadu) ಸಂಸದ ಎ. ಗಣೇಶಮೂರ್ತಿ (76) (A Ganeshamurthi) ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ (Cardiac Arrest) ಮೃತಪಟ್ಟಿದ್ದಾರೆ. ಎಂಡಿಎಂಕೆ ನಾಯಕರೂ ಆಗಿರುವ ಎ. ಗಣೇಶಮೂರ್ತಿ ಅವರು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ಮಾರ್ಚ್ 28) ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಡಿಎಂಕೆ, ಎಂಡಿಎಂಕೆ ಸೇರಿ ಹಲವು ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
ಕಳೆದ ಭಾನುವಾರ (ಮಾರ್ಚ್ 24) ಬೆಳಗ್ಗೆ ಎ. ಗಣೇಶಮೂರ್ತಿ ಅವರು ವಾಂತಿ ಮಾಡಿಕೊಂಡಿದ್ದರು. ಕುಟುಂಬಸ್ಥರು ಕೇಳಿದಾಗ ಕೀಟನಾಶಕವಾದ ಸಲ್ಫಸ್ ಸೇವಿಸಿದ್ದೇನೆ ಎಂಬುದಾಗಿ ತಿಳಿಸಿದ್ದರು. ಇದರಿಂದ ಭೀತಿಗೊಳಗಾದ ಕುಟುಂಬಸ್ಥರು ಕೂಡಲೇ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಎಕೋ ಸಪೋರ್ಟ್ ಮೂಲಕ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅವರಿಗೆ ಗುರುವಾರ ಬೆಳಗ್ಗೆ ಹೃದಯ ಸ್ತಂಭನ ಉಂಟಾಗಿದೆ. ಇದರಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
#UPDATE | MDMK MP from Erode, Ganesamoorthy passed away at 5:05 am today due to cardiac arrest. He was hospitalised on March 24 after allegedly attempting suicide. #TamilNadu https://t.co/tGQAZoRuD2
— ANI (@ANI) March 28, 2024
ಆಸ್ಪತ್ರೆಗೆ ಸಾಗಿಸುವಾಗಲೇ ಎ. ಗಣೇಶಮೂರ್ತಿ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿತ್ತು. ಅವರಿಗೆ ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಕೊನೆಗೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು, ಎ. ಗಣೇಶಮೂರ್ತಿ ಅವರ ನಿಧನದ ಸುದ್ದಿ ತಿಳಿಯುತ್ತಲೇ ಎಂಡಿಎಂಕೆ ನಾಯಕ ದೊರೈ ವೈಕೋ ಅವರು ಕೊಯಮತ್ತೂರಿಗೆ ಆಗಮಿಸಿ, ಸಂತಾಪ ಸೂಚಿಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಎ. ಗಣೇಶಮೂರ್ತಿ ಅವರು 2019ರಲ್ಲಿ ಎಂಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: Self Harming: ಐಪಿಎಲ್ ಬೆಟ್ಟಿಂಗ್‌ನಲ್ಲಿ 1.5 ಕೋಟಿ ಕಳೆದುಕೊಂಡ ಪತಿ; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಟಿಕೆಟ್ ನಿರಾಕರಣೆಯೇ ಆತ್ಮಹತ್ಯೆಗೆ ಕಾರಣ?
ಈರೋಡ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಡಿಎಂಕೆ ಹಾಗೂ ಎಂಡಿಎಂಕೆ ನಿರಾಕರಿಸಿರುವುದೇ ಎ. ಗಣೇಶಮೂರ್ತಿ ಅವರು ಕೀಟನಾಶಕ ಸೇವಿಸಲು ಕಾರಣ ಎಂದು ತಿಳಿದುಬಂದಿದೆ. ಈರೋಡ್ ಲೋಕಸಭೆ ಕ್ಷೇತ್ರದಿಂದ ಈ ಬಾರಿ ದೊರೈ ವೈಕೋ ಅವರ ಪುತ್ರನಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಹಲವು ಬಾರಿ ಮನವೊಲಿಸಿದರೂ ನಾಯಕರು ತಮಗೆ ಟಿಕೆಟ್ ನೀಡಲು ನಿರಾಕರಿಸಿದರು ಎಂಬ ಬೇಸರ ಅವರದ್ದಾಗಿತ್ತು. ಇದರಿಂದಾಗಿ ಮನನೊಂದ ಗಣೇಶಮೂರ್ತಿ ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ