Site icon Vistara News

Tamil Nadu: ಒಂದು ದೇಶ ಒಂದು ಚುನಾವಣೆ, ಡಿಲಿಮಿಟೇಶನ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

stalin in assembly

stalin in assembly

ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭೆ ಡಿಲಿಮಿಟೇಶನ್ ಪ್ರಕ್ರಿಯೆ (Delimitation exercise) ಮತ್ತು ಭಾರತ ಸರ್ಕಾರ ಪ್ರಸ್ತಾಪಿಸಿದ ʼಒಂದು ದೇಶ, ಒಂದು ಚುನಾವಣೆʼ (one nation, one election) ನೀತಿಯನ್ನು ವಿರೋಧಿಸಿ ಎರಡು ನಿರ್ಣಯಗಳನ್ನು ಅಂಗೀಕರಿಸಿದೆ. ಡಿಲಿಮಿಟೇಶನ್ ಪ್ರಕ್ರಿಯೆಯು 1971ರ ನೀತಿಯನ್ನು ಆಧರಿಸಿರಬೇಕು ಮತ್ತು 2026ರ ಜನಗಣತಿಯನ್ನು ಆಧರಿಸಿರಬಾರದು ಮತ್ತು ಉದ್ದೇಶಿತ ಏಕಕಾಲದ ಚುನಾವಣೆಗಳು ಅಪ್ರಾಯೋಗಿಕ ಮತ್ತು ಸಂವಿಧಾನಕ್ಕೆ ವಿರುದ್ಧ ಎಂಬ ಕಾರಣ ನೀಡಿ ನಿರ್ಣಯ ಕೈಗೊಳ್ಳಲಾಗಿದೆ. ಡಿಎಂಕೆ (Dravida Munnetra Kazhagam-DMK) ಸರ್ಕಾರ ಮಂಡಿಸಿದ ಈ ಎರಡು ನಿರ್ಣಯಗಳನ್ನು ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿದೆ. ಈ ನಿರ್ಣಯಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಾಯಕ ನಿಲುವು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ʼಸರ್ವಾಧಿಕಾರಿ ಧೋರಣೆʼ ವಿರುದ್ಧ ಇದು ʼನಿರ್ಣಾಯಕ ನಿಲುವುʼ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಣ್ಣಿಸಿದ್ದಾರೆ. ಅಲ್ಲದೆ, ವಿಧಾನಸಭೆಯಲ್ಲಿ ಎರಡು ನಿರ್ಣಯಗಳ ಅಂಗೀಕಾರವನ್ನು ʼತಮಿಳುನಾಡಿಗೆ ಮಹತ್ವದ ಕ್ಷಣʼ ಎಂದು ಶ್ಲಾಘಿಸಿದ್ದಾರೆ.

“ಎರಡನೇ ದರ್ಜೆಯ ನಾಗರಿಕರಂತೆ ನಮ್ಮನ್ನು ಪರಿಗಣಿಸುವುದನ್ನು ವಿರೋಧಿಸುತ್ತೇವೆ. ಸರ್ವಾನುಮತದಿಂದ ಎರಡು ನಿರ್ಣಯಗಳನ್ನು ಅಂಗೀಕರಿಸಿದ್ದೇವೆ. ಅನ್ಯಾಯದ ಡಿಲಿಮಿಟೇಶನ್ ಪ್ರಕ್ರಿಯೆಯಿಂದ ನಮ್ಮ ರಾಜ್ಯವನ್ನು ರಕ್ಷಿಸಲು ಮತ್ತು ನಮ್ಮ ವೈವಿಧ್ಯಮಯ ಪ್ರಜಾಪ್ರಭುತ್ವದ ರಚನೆಗೆ ಬೆದರಿಕೆಯೊಡ್ಡುವ ಒಂದು ದೇಶ ಒಂದು ಚುನಾವಣೆ ಕಲ್ಪನೆಯನ್ನು ಬಲವಾಗಿ ವಿರೋಧಿಸಲು ಈ ನಿರ್ಣಯ ಕೈಗೊಂಡಿದ್ದೇವೆ. ಈ ವಿಚಾರಗಳಲ್ಲಿ ತಮಿಳುನಾಡಿನ ಸಂಕಲ್ಪವು ದೃಢವಾಗಿದೆ” ಎಂದು ಸ್ಟಾಲಿನ್‌ ಹೇಳಿದ್ದಾರೆ.

ʼʼಜನಗಣತಿ ಆಧಾರದ ಮೇಲೆ ಡಿಲಿಮಿಟೇಶನ್ ಅನ್ನು ಒಪ್ಪಲು ಸಾಧ್ಯವಿಲ್ಲ. ಜನಗಣತಿ ಆಧಾರದ ಮೇಲೆ ಡಿಲಿಮಿಟೇಶನ್ ಮಾಡುವುದರಿಂದ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಜಾರಿಗೆ ತರಲು ಆಸಕ್ತಿ ತೋರದ ರಾಜ್ಯಗಳು ಹೆಚ್ಚಿನ ಲಾಭವನ್ನು ಪಡೆಯುತ್ತವೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 1971ರ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನ ಉಭಯ ಸದನಗಳ ನಡುವಿನ ಕ್ಷೇತ್ರಗಳ ಪ್ರಸ್ತುತ ಅನುಪಾತವನ್ನು ನಿಗದಿಪಡಿಸಲಾಗಿದೆ. ಅದನ್ನು ಮುಂದುವರಿಸಬೇಕುʼʼ ಎಂದು ಸ್ಟಾಲಿನ್‌ ಹೇಳಿದ್ದಾರೆ.

ಅಲ್ಲದೆ, ಡಿಲಿಮಿಟೇಶನ್ ಜಾರಿಗೆ ತಂದರೆ ತಮಿಳುನಾಡಿನಲ್ಲಿರುವ 39 ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ. ಇದು ನಮ್ಮ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಒಂದು, ದೇಶ ಒಂದು ಚುನಾವಣೆಯ ಬಗ್ಗೆ ಮಾತನಾಡಿದ ತಮಿಳುನಾಡು ಸಿಎಂ ಸ್ಟಾಲಿನ್‌, “ಇದು ಅಪ್ರಾಯೋಗಿಕವಾಗಿದೆ ಮತ್ತು ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಇದನ್ನು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ʼʼಒಂದು ವೇಳೆ ಕೇಂದ್ರದಲ್ಲಿ ಸರ್ಕಾರ ಪತನವಾದರೆ ಎಲ್ಲ ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸಲಾಗುತ್ತದೆಯೇ? ಕೆಲವು ರಾಜ್ಯಗಳಲ್ಲಿನ ಸರ್ಕಾರಗಳು ಅಲ್ಪಾವಧಿಯದ್ದಾಗಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಕೆಳಗಿಳಿಯುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಎಂಬುದು ಭಾರತ ಸರ್ಕಾರದ ಪ್ರಸ್ತಾವನೆಯಾಗಿದ್ದು, ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿ ಹೊಂದಿದೆ. ಪ್ರಸ್ತುತ ಪ್ರಸ್ತಾವನೆಯು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ಪರಿಶೀಲನೆಯಲ್ಲಿದೆ.

ಇದನ್ನೂ ಓದಿ: Viral Photo: ಜೋಕೊವಿಕ್ ಜತೆ ಫೋಟೊ ತೆಗೆಸಿಕೊಂಡ ತಮಿಳುನಾಡು ಸಿಎಂ ಸ್ಟಾಲಿನ್‌

ಡಿಲಿಮಿಟೇಶನ್ ಎಂದರೇನು?

ಭಾರತದ ಚುನಾವಣಾ ಆಯೋಗದ ಪ್ರಕಾರ, ಡಿಲಿಮಿಟೇಶನ್ ಎಂದರೆ ಒಂದು ದೇಶದಲ್ಲಿ ಅಥವಾ ಶಾಸಕಾಂಗ ಸಂಸ್ಥೆಯನ್ನು ಹೊಂದಿರುವ ಪ್ರಾಂತ್ಯದಲ್ಲಿ ಪ್ರಾದೇಶಿಕ ಕ್ಷೇತ್ರಗಳ ಮಿತಿಗಳು ಅಥವಾ ಗಡಿಗಳನ್ನು ನಿಗದಿಪಡಿಸುವ ಕ್ರಿಯೆ ಅಥವಾ ಪ್ರಕ್ರಿಯೆ. ಡಿಲಿಮಿಟೇಶನ್ ನಿಗದಿಪಡಿಸುವ ಜವಾಬ್ದಾರಿಯನ್ನು ಉನ್ನತ ಅಧಿಕಾರದ ಸಂಸ್ಥೆಗೆ ನೀಡಲಾಗುತ್ತದೆ. ಅಂತಹ ಸಂಸ್ಥೆಯನ್ನು ಡಿಲಿಮಿಟೇಶನ್ ಆಯೋಗ ಅಥವಾ ಗಡಿ ಆಯೋಗ ಎಂದು ಕರೆಯಲಾಗುತ್ತದೆ. ಆದರೆ ಲೋಕಸಭಾ ಕ್ಷೇತ್ರಗಳ ಜನಸಂಖ್ಯಾ ಆಧಾರಿತ ಡಿಲಿಮಿಟೇಶನ್ ಪ್ರಕ್ರಿಯೆಗೆ ಹಲವು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇದು ಲೋಕಸಭೆಯಲ್ಲಿ ಉತ್ತರದ ರಾಜ್ಯಗಳಿಗೆ ಅನಗತ್ಯ ಅನುಕೂಲವನ್ನು ನೀಡುತ್ತದೆ ಎಂಬುದು ಅನೇಕರ ವಾದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version