ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ‘ಟ್ಯಾಕ್ಟಿಕಲ್ ಏರಿಯಲ್ ಪ್ಲಾಟ್‌ಫಾರ್ಮ್ ಫಾರ್ ಅಡ್ವಾನ್ಸ್ಡ್ ಸರ್ವೀಲೆನ್ಸ್’ (Tactical Aerial Platform for Advanced Surveillance- TAPAS 201) ‘ತಪಸ್ 201’ ಮಾನವರಹಿತ ವೈಮಾನಿಕ ವಾಹನ(UAV)ವು ಬಳಕೆದಾರರ ಮೌಲ್ಯಮಾಪನ ಪರೀಕ್ಷೆಗೆ ಸಿದ್ಧವಾಗಿದೆ. ತಪಸ್ 201 ವಿಮಾನವನ್ನು ಸುಧಾರಿತ ಕಣ್ಗಾವಲಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಿಆರ್‌ಡಿಒ ಹೇಳಿದೆ. ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ಮೆಂಟ್(ADE) ತಪಸ್ 201 ಡ್ರೋನ್ ಅನ್ನು ವಿನ್ಯಾಸ ಮಾಡಿ, ಅಭಿವೃದ್ಧಿಪಡಿಸಿದೆ. ತಪಸ್ 201 ಮಲ್ಟಿ ಮಿಷನ್ ಮಾನವ ರಹಿತ ವೈಮಾನಿಕ ವಾಹನವಾಗಿದೆ. 24 ರಿಂದ 30 ಗಂಟೆಗಳ ಕಾಲ ಮೂರೂ ಸಶಸ್ತ್ರ ಪಡೆಗಳಿಗೆ ಗುಪ್ತಚರ, ಕಣ್ಗಾವಲು ಉದ್ದೇಶಕ್ಕೆ ಈ ತಪಸ್ 201 ಬಳಕೆಯಾಗಲಿದೆ. ತಪಸ್ 201 ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಶುರು ಮಾಡಿದರೆ, ಭಾರತೀಯ ಸೇನೆಗಳಿಗೆ ಭೀಮ ಬಲ ಬರಲಿದೆ. ಸಹಜವಾಗಿಯೇ ಇದು ನಮ್ಮ ನೆರೆಯ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳಿಗೆ ಆಂತಕ ಉಂಟು ಮಾಡಲಿದೆ.
ಜೂನ್ 27 ರಂದು ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಮೊದಲ ಬಾರಿಗೆ ಮೂರು ಸೇನೆಗಳ ಸೇವಾ ತಂಡದ ತಪಸ್ 201 ಯುಎವಿಯನ್ನು ಪ್ರದರ್ಶನ ಮಾಡಲಾಯಿತು. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO) ಯುಎವಿ ಅಭಿವೃದ್ಧಿಗೆ ಸ್ಥಳೀಯ ಪ್ರಯತ್ನಗಳನ್ನು ತಂಡವು ಶ್ಲಾಘಿಸಿದೆ ಮತ್ತು ಅದು ಈಗ ಬಳಕೆದಾರರ ಮೌಲ್ಯಮಾಪನ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ಹೇಳಿದೆ.
ಈ ಸುದ್ದಿಯನ್ನೂ ಓದಿ:ಪಾಕಿಸ್ತಾನಿ ಏಜೆಂಟ್ಗೆ ಗುಪ್ತ ಮಾಹಿತಿ ರವಾನೆ; ಡಿಆರ್‌ಡಿಒ ಹಿರಿಯ ನಿರ್ದೇಶಕನನ್ನು ಬಂಧಿಸಿದ ಮಹಾರಾಷ್ಟ್ರ ಎಟಿಎಸ್
ಅಮೆರಿಕದ ಪ್ರಿಡೇಟರ್ ಡ್ರೋನ್‌ಗಳ ಭಾರತೀಯ ಆವೃತ್ತಿ ಎಂದು ಕರೆಯಲಾಗುವ ತಪಸ್ 201 ಮಧ್ಯಮ ಶ್ರೇಣಿಯ ಎಲೆಕ್ಟ್ರೋ ಆಪ್ಟಿಕ್, ಲಾಂಗ್ ರೇಂಜ್ ಎಲೆಕ್ಟ್ರೋ ಆಪ್ಟಿಕ್, ಸಿಂಥೆಟಿಕ್ ಅಪರ್ಚರ್ ರಾಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್, ಸಂವಹನ ಬುದ್ಧಿವಂತಿಕೆ ಮತ್ತು ದಿನ ಹಾಗೂ ರಾತ್ರಿವಿಡೀ ವೇರ್‌ಲೋಡ್‌ಗಳ ಕಾರ್ಯಕ್ಷಮತೆಯಂತಹ ವಿಭಿನ್ನ ಸಂಯೋಜನೆಯ ಪೇಲೋಡ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಡ್ರೋನ್ ಅನ್ನು ಈ ಮೊದಲು ರುಸ್ತೋಮ್ ಎಂದು ಕರೆಯಲಾಗುತ್ತಿತ್ತು. ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಹೊರತಾಗಿ, ರಾಜ್ಯ ಪೊಲೀಸ್ ಪಡೆಗಳು, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕೋಸ್ಟ್ ಗಾರ್ಡ್‌ಗಳಂತಹ ಆಂತರಿಕ ಭದ್ರತಾ ಏಜೆನ್ಸಿಗಳು ಸಹ ತಪಸ್ 201ನ ನಿರೀಕ್ಷಿತ ಬಳಕೆದಾರರಾಗಿದ್ದಾರೆ. ಬೆಂಗಳೂರಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿ. ಕಂಪನಿಗಳು ಉತ್ಪಾದನಾ ಪಾಲುದಾರ ಕಂಪನಿಗಳಾಗಿವೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.