ನವ ದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ಅವರ ಶಿರಚ್ಛೇದ ಪ್ರಕರಣಕ್ಕೆ ಖ್ಯಾತ ಕಾದಂಬರಿಕಾರ್ತಿ ತಸ್ಲೀಮಾ ನಸ್ರೀನ್ ಆತಂಕ ವ್ಯಕ್ತಪಡಿಸಿದ್ದಾರೆ. “ಭಾರತದಲ್ಲೂ ಹಿಂದೂಗಳು ಸುರಕ್ಷಿತವಾಗಿಲ್ಲʼʼ ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ.
ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ನಯ್ಯ ಲಾಲ್ ಅವರನ್ನು ರಿಯಾಜ್ ಮತ್ತು ಗಿಯಾಸ್ ಎಂಬುವರು ಹತ್ಯೆ ಮಾಡಿದ್ದಾರೆ. ಈ ಬರ್ಬರ ಹತ್ಯೆಯನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅವರೇ ಪ್ರಸಾರ ಮಾಡಿದ್ದಾರೆ. ಜತೆಗೆ ಸಂತೋಷದಿಂದ ತಮ್ಮ ದುಷ್ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರವಾದಿಗಾಗಿ ಏನನ್ನು ಬೇಕಾದರೂ ಮಾಡುವುದಾಗಿ ಘೋಷಿಸಿದ್ದಾರೆ. ಮತಾಂಧರು ಅತ್ಯಂತ ಕ್ರೂರಿಗಳಾಗಿದ್ದು, ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂಬುದನ್ನು ಈ ಕಗ್ಗೊಲೆ ಬಿಂಬಿಸಿದೆ ಎಂದು ತಸ್ಲಿಮಾ ನಸ್ರೀನ್ ಆಘಾತ ವ್ಯಕ್ತಪಡಿಸಿದ್ದಾರೆ.
ಕೇವಲ ಮುಸ್ಲಿಮೇತರರಿಗೆ ಮಾತ್ರವಲ್ಲದೆ ಮುಕ್ತ ಚಿಂತಕರಿಗೂ, ಪ್ರಗತಿಪರ ಮುಸ್ಲಿಮರಿಗೂ ಜಿಹಾದಿಗಳು ಕಂಟಕರಾಗಿದ್ದಾರೆ. ಅವರನ್ನೂ ಈ ಮತಾಂಧರು ಶಿರಚ್ಛೇದ ಮಾಡಿದ್ದಾರೆ. ಮತೀಯ ಮೂಲಭೂತವಾದ ಇಡೀ ಮಾನವತೆಗೆ ಅತ್ಯಂತ ಅಪಾಯಕಾರಿ ಎಂದು ತಸ್ಲಿಮಾ ಸರಣಿ ಟ್ವೀಟ್‌ಗಳಲ್ಲಿ ವಿವರಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಾಲೇಜಿನ ಪ್ರಾಂಶುಪಾಲರೊಬ್ಬರು ನೂಪರ್ ಶರ್ಮಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದ ವಿದ್ಯಾರ್ಥಿಯನ್ನು ಸಮರ್ಥಿಸಿದ್ದರು. ಇದಕ್ಕಾಗಿ ಮತಾಂಧರು ಅವರ ಕುತ್ತಿಗೆಗೆ ಹರಿದ ಶೂಗಳ ಮಾಲೆಯನ್ನು ಹಾಕಿದ್ದರು. ಉದಯಪುರದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಹಿಂದೂ ಟೈಲರ್ ಒಬ್ಬರನ್ನು ಇಬ್ಬರು ಮುಲ್ಲಾಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.
ಕಂಗನಾ ರಣಾವತ್ ಖಂಡನೆ
ಉದಯಪುರದಲ್ಲಿ ನಡೆದಿರುವ ಹಿಂದೂ ಟೈಲರ್ ಕನ್ನಯ್ಯಲಾಲ್ ಅವರ ಬರ್ಬರ ಹತ್ಯೆಯಿಂದ ದಿಗ್ಭ್ರಮೆಯಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆಘಾತ ವ್ಯಕ್ತಪಡಿಸಿದ್ದಾರೆ. “ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಕನ್ನಯ್ಯ ಲಾಲ್ ಅವರ ಅಂಗಡಿಗೆ ನುಗ್ಗಿದ ಮತಾಂಧ ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಈ ಕಗ್ಗೊಲೆ ನಡೆಸಿದ್ದಾರೆ. ಈ ಭಯಾನಕ ವಿಡಿಯೊಗಳನ್ನು ನೋಡುವ ಧೈರ್ಯ ನನ್ನಲ್ಲಿಲ್ಲ…ʼʼ ಎಂದು ಕಂಗನಾ ರಣಾವತ್ ಹೇಳಿಕೆ ನೀಡಿದ್ದಾರೆ.
ಕತಾರ್ ಕ್ಷಮೆ ಯಾಚಿಸಲಿ ಎಂದ ವಿವೇಕ್ ಅಗ್ನಿಹೋತ್ರಿ
ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟೈಲರ್ ಕನ್ನಯ್ಯಲಾಲ್ ಅವರ ಶಿರಚ್ಛೇದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಕತಾರ್ ಅಧಿಕೃತವಾಗಿ ಹಿಂದೂಗಳ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಭಾರತದಲ್ಲಿ ನೂಪುರ್ ಶರ್ಮಾ ಅವರ ಹೇಳಿಕೆ ಕುರಿತಾಗಿ ಕತಾರ್ ವಿವಾದ ಸೃಷ್ಟಿಸಿತ್ತು. ಈ ಕಾರಣಕ್ಕಾಗಿ ಕತಾರ್ ಅಧಿಕೃತವಾಗಿ ಹಿಂದೂಗಳ ಕ್ಷಮೆ ಯಾಚಿಸಬೇಕಾಗಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.