ನವದೆಹಲಿ: ಟಾಟಾ ಗ್ರೂಪ್ (TaTa Group) ಒಡೆತನದ, ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಏರ್ ಇಂಡಿಯಾ (Air India) ಕಂಪನಿಯು 180 ಸಿಬ್ಬಂದಿಯನ್ನು (Air India Layoffs) ವಜಾಗೊಳಿಸಿದೆ. ಕಳೆದ ಕೆಲವು ವಾರಗಳಲ್ಲಿಯೇ ಏರ್ ಇಂಡಿಯಾ ಸಂಸ್ಥೆಯು 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದು, ಇದಕ್ಕೆ ಕೆಲ ಕಾರಣಗಳನ್ನೂ ನೀಡಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಲ್ಲಿ ಜಗತ್ತಿನ ನೂರಾರು ಕಂಪನಿಗಳು ನೌಕರರನ್ನು ವಜಾಗೊಳಿಸಿದರೂ ಟಾಟಾ ಗ್ರೂಪ್ ಮಾತ್ರ ಹೆಚ್ಚಿನ ನೌಕರರನ್ನು ವಜಾಗೊಳಿಸಿರಲಿಲ್ಲ. ಈಗ ದಿಢೀರನೆ 180 ನೌಕರರನ್ನು ವಜಾಗೊಳಿಸಿದೆ.
ಸ್ವಯಂ ನಿವೃತ್ತಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳದಿರುವುದು ಹಾಗೂ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳದ ಕಾರಣದಿಂದಾಗಿ 180 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನದಲ್ಲಿ ಹಾರಾಟ ನಡೆಸದ ಸಿಬ್ಬಂದಿಯನ್ನು (Non-Flying Employees) ಮಾತ್ರ ವಜಾಗೊಳಿಸಲಾಗಿದೆ. ವಿಮಾನದ ಪೈಲಟ್‌ಗಳು ಅಥವಾ ಗಗನಸಖಿಯರನ್ನು ವಜಾಗೊಳಿಸಿಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಉದ್ಯೋಗಿಗಳ ವಜಾ ಕುರಿತು ವಿಮಾನಯಾನ ಸಂಸ್ಥೆಯ ವಕ್ತಾರರೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. “2022ರಲ್ಲಿ ಏರ್ ಇಂಡಿಯಾ ಸಂಸ್ಥೆಯು ಟಾಟಾ ಗ್ರೂಪ್ ಒಡೆತನಕ್ಕೆ ಸೇರಿದ ನಂತರ ನೌಕರರ ಕೌಶಲಗಳ ವೃದ್ಧಿ, ಸ್ವಯಂ ನಿವೃತ್ತಿ ಯೋಜನೆಗಳನ್ನು ಜಾರಿಗೆ ತರಲಾಯಿತು. ವೃತ್ತಿಪರತೆ, ವೃತ್ತಿ ದಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಕೆಲ ನೌಕರರಿಗೆ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಅವಕಾಶವನ್ನೂ ನೀಡಲಾಯಿತು. ಇವುಗಳನ್ನು ಸದುಪಯೋಗ ಮಾಡಿಕೊಳ್ಳದ ಕಾರಣ 180 ನೌಕರರನ್ನು ವಜಾಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Medical Negligence : ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯರ ಸಾವು; ಕರ್ತವ್ಯ ಲೋಪದಡಿ ಮೂವರು ಸಿಬ್ಬಂದಿ ವಜಾ
ವಾರ್ಷಿಕ ಪ್ರಕ್ರಿಯೆ, ಉದ್ಯೋಗಿಗಳ ಕೆಲಸದ ದಕ್ಷತೆ ಆಧಾರದ ಮೇಲೆ ಶೇ.20ರಷ್ಟು ನೌಕರರನ್ನು ವಜಾಗೊಳಿಸಲು ಪೇಟಿಎಂ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ, ದೇಶಾದ್ಯಂತ ಇರುವ ಹಲವು ವಿಭಾಗಗಳಲ್ಲಿ ಆಯಾ ತಂಡದಲ್ಲಿ ಶೇ.20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ. ಕಳೆದ ಎರಡು ವಾರಗಳಿಂದ ನೌಕರರನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದಿಷ್ಟು ಮೂಲಗಳ ಪ್ರಕಾರ, ಆರ್‌ಬಿಐ ನಿರ್ಬಂಧದ ಹಿನ್ನೆಲೆಯಲ್ಲಿ ಕಂಪನಿಗೆ ನಷ್ಟವಾಗಿದ್ದು, ಇದರಿಂದಾಗಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ