ನವ ದೆಹಲಿ: ಭಾರತದ ಸ್ಟೀಲ್ ಮ್ಯಾನ್ (J J Irani Died) ಎಂದೇ ಪ್ರಸಿದ್ಧರಾಗಿದ್ದ ಜಮ್ಶೆಡ್ ಜೆ ಇರಾನಿ ಅವರು ಸೋಮವಾರ ರಾತ್ರಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೆಮ್ಶಡ್‌ಪುರದ ಟಾಟಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ರಾತ್ರಿ ಉಸಿರು ಚೆಲ್ಲಿದರು ಎಂದು ಟಾಟಾ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2011ರಲ್ಲಿ ಇರಾನಿ ಅವರು ಟಾಟಾ ಸ್ಟೀಲ್ ಆಡಳಿತ ಮಂಡಳಿಯಿಂದ ನಿವೃತ್ತರಾಗುವ ಮುಂಚೆ 43 ವರ್ಷಗಳ ಕಾಲ ಕಂಪನಿಗೆ ದುಡಿದಿದ್ದರು. ನಾನಾ ಕ್ಷೇತ್ರಗಳಲ್ಲಿ ಕಂಪನಿಯು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಳ್ಳಲು ಅವರು ನೆರವು ನೀಡಿದ್ದರು. 1936 ಜೂನ್ 2ರಂದು ನಾಗ್ಪುರದದಲ್ಲಿ ಜನಿಸಿದರು. ತಂದೆ ತಾಯಿ- ಜೀಜಿ ಇರಾನಿ, ಖೋರ್ಶೆಡ್ ಇರಾನಿ. ನಾಗ್ಪುರದಲ್ಲಿ ತಮ್ಮ ಬಿಎಸ್‌ಸಿ ಪದವಿಯನ್ನು ಪೂರೈಸಿದ ಅವರು, 1958ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂಎಸ್‌ಸಿ ಪದವಿಯನ್ನು ಪಡೆದುಕೊಂಡರು.
ಬಳಿಕ, ಜೆ ಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದುಕೊಂಡು ಇಂಗ್ಲೆಂಡ್‌ಗೆ ತೆರಳಿ ಶೆಫೆಲ್ಡ್ ವಿಶ್ವವಿದ್ಯಾಲಯದಲ್ಲಿ ಅವರು ಲೋಹಶಾಸ್ತ್ರದಲ್ಲಿ ಮಾಸ್ಟರ್ ಮತ್ತು ಇದೇ ವಿಷಯದಲ್ಲಿ ಪಿಎಚ್‌ಡಿ ಕೂಡ ಮಾಡಿದರು. ತಮ್ಮ ವೃತ್ತಿಯನ್ನು ಅವರು ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಶಿಯೇಷನ್ ಆಗಿ ಆರಂಭಿಸಿದರು. ಬಳಿಕ ಭಾರತಕ್ಕೆ ಹಿಂದಿರುಗಿ, ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿ(ಈಗ ಟಾಟಾ ಸ್ಟೀಲ್) ಸೇರಿಕೊಂಡರು. ಈ ಕಂಪನಿಯಲ್ಲಿ ನಾನಾ ಹುದ್ದೆಗಳನ್ನು ನಿರ್ವಹಿಸಿ, ಕಂಪನಿಯ ಒಟ್ಟಾರೆ ಬೆಳವಣಿಗೆಯಲ್ಲಿ ತಮ್ಮ ಕಾಣಿಕೆಯನ್ನು ನೀಡಿದರು. ಕಂಪನಿಯನ್ನು ಅವರು ಡೈರೆಕ್ಟರ್‌ಗೆ ಅಸಿಸ್ಟಂಟ್ ಆಗಿ ಸೇರಿಕೊಂಡು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ರಿಟೈರ್ ಆದರು . ಆ ಬಳಿಕ ಅವರು ಟಾಟಾ ಸ್ಟೀಲ್ ಆಡಳಿತ ಮಂಡಳಿಯನ್ನು ಸೇರಿದರು. ಸಾಕಷ್ಟು ಗೌರವ, ಸಮ್ಮಾನಗಳೂ ಇವರಿಗೆ ಸಂದಿವೆ.
ಇದನ್ನೂ ಓದಿ | Cyrus Mistry Death | ಸೈರಸ್ ಮಿಸ್ತ್ರಿ: ಉದ್ಯಮ ಜಗತ್ತನ್ನು ಬಿಟ್ಟು ನಡೆದ ದಿಗ್ಗಜ