Site icon Vistara News

ಸಾಮ್ರಾಟ್ ಪೃಥ್ವಿರಾಜ್ ಗೆ ತೆರಿಗೆ ವಿನಾಯಿತಿ ಘೋಷಿಸಿದ ಯೋಗಿ ಆದಿತ್ಯನಾಥ್

ಪೃಥ್ವಿರಾಜ್'

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಚಿತ್ರವು ಜೂನ್ 3ರಂದು ಬಿಡುಗಡೆಯಾಗಲಿದೆ. ಈ ನಡುವೆ ಒಮನ್, ಕುವೈಟ್ ಮುಂತಾದ ಇಸ್ಲಾಮಿಕ್ ದೇಶಗಳಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿದೆ.

ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಗೃಹ ಸಚಿವ ಅಮಿತ್ ಶಾ ಅವರಿಗೆ ಅಕ್ಷಯ್ ಕುಮಾರ್ ಅವರು ಗುರುವಾರ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಚಿತ್ರವನ್ನು ವೀಕ್ಷಿಸಿ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಭಾರತದ ಶ್ರೀಮಂತ ಸಂಸ್ಕೃತಿಯನ್ನು ತೋರಿಸಿದ್ದಕ್ಕಾಗಿ ನಿರ್ದೇಶಕರು ಮತ್ತು ಚಿತ್ರತಂಡವನ್ನು ಯೋಗಿ ಅಭಿನಂದಿಸಿದ್ದಾರೆ. “ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಭಾರತದ ಇತಿಹಾಸವನ್ನು ಸುಂದರವಾಗಿ ತೋರಿಸಿದ್ದಾರೆ. ಅದಕ್ಕಾಗಿ ನಾನು ತಂಡವನ್ನು ಅಭಿನಂದಿಸುತ್ತೇನೆ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸಾಮ್ರಾಟ್ ಪೃಥ್ವಿರಾಜ್ ಹಿನ್ನೆಲೆ ಏನು?: ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಮಹಾರಾಜ ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧರಿಸಿದೆ. ಮೊಘಲ್‌ ದಾಳಿಕೋರ ಘೋರಿ ಮುಹಮ್ಮದ್ ವಿರುದ್ಧ ಧೈರ್ಯದಿಂದ ಹೋರಾಡಿದ ಮಹಾನ್ ಯೋಧನ ಪಾತ್ರವನ್ನು ಸೂಪರ್‌ಸ್ಟಾರ್ ಅಕ್ಷಯ್‌ ಕುಮಾರ್ ನಿರ್ವಹಿಸಿದ್ದಾರೆ. ಮಾನುಷಿ ಛಿಲ್ಲರ್ ರಾಜ ಪೃಥ್ವಿರಾಜ್ ಚೌಹಾಣ್ ಅವರ ಪ್ರೀತಿಯ ಸಂಯೋಗಿತಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ನಟಿಸಿದ್ದಾರೆ. ಈ ಚಿತ್ರ ಮೂರು ಭಾಷೆಗಳಲ್ಲಿ (ಹಿಂದಿ, ತಮಿಳು ಮತ್ತು ತೆಲುಗು) ಬಿಡುಗಡೆಯಾಗಲಿದೆ.

ಬಹು ಚರ್ಚಿತ ಚಿತ್ರ: ಸಾಮ್ರಾಟ್ ಪೃಥ್ವಿರಾಜ್ ಕಳೆದ ಕೆಲವು ವಾರಗಳಲ್ಲಿ ‘ಟಾಕ್‌ ಆಫ್‌ ದ ಟೌನ್’ ಎಂಬಂತೆ ಬಹುಚರ್ಚಿತವಾಗಿದೆ. ಈ ಐತಿಹಾಸಿಕ ಮಹಾಕಾವ್ಯ ಚಲನಚಿತ್ರವನ್ನು ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಇದು ಭಾರತದ ಕೊನೆಯ ಹಿಂದೂ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಒಳಗೊಂಡಿದೆ.

ಸಾಮ್ರಾಟ್‌ ಪೃಥ್ವಿರಾಜ್‌’ ಡೈಲಾಗ್ ಹೊಡೆದ ಅಮಿತ್ ಶಾ: ಗೃಹ ಸಚಿವ ಅಮಿತ್ ಶಾ ಅವರು ಅಕ್ಷಯ್ ಕುಮಾರ್ ಅವರ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವನ್ನು ನೋಡಿದ ನಂತರ ಪತ್ನಿ ಸೋನಾಲ್ ಶಾಗೆ ‘ಚಲಿಯೇ ಹುಕುಂ’ ಎಂದು ಹೇಳಿದ್ದು ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿತು. ಈ ಚಿತ್ರದ ಬಗ್ಗೆ ಮಾತನಾಡಿ ಮುಗಿದ ಮೇಲೆ, ಪತ್ನಿ ಸೋನಾಲ್ ಶಾ ಇನ್ನೂ ಹೊರಡದೆ ನಿಂತಿರುವುದನ್ನು ಕಂಡು ಅವರತ್ತ ತಿರುಗಿ, “ಚಲಿಯೇ ಹುಕುಂ” ಎಂದು ನಗೆಚಟಾಕಿ ಹಾರಿಸಿದರು.

ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಪಾತ್ರಗಳು ಪರಸ್ಪರ ಹೀಗೆ ಸಂಬೋಧಿಸುವ ರೀತಿಯಲ್ಲೇ ಅಮಿತ್ ಶಾ ಡೈಲಾಗ್ ಹೊಡೆದಾಗ ಸೋನಾಲ್ ಶಾ ಮುಖ ಕೆಂಪೇರಿದರೆ, ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಅಮಿತ್ ಶಾ ಪುತ್ರ ಜಯ್ ಶಾ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚಿತ್ರ ಮೆಚ್ಚಿದ ಅಮಿತ್ ಶಾ: ಈ ಚಿತ್ರದ ಕುರಿತು ಮಾತನಾಡಿದ ಅಮಿತ್ ಶಾ “ಇತಿಹಾಸದ ವಿದ್ಯಾರ್ಥಿಯಾಗಿ ನಾವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ಚಿತ್ರವನ್ನು ನೋಡಿ ಆನಂದಿಸಿದೆವು” ಎಂದಿದ್ದಾರೆ. “ಸುಮಾರು 13 ವರ್ಷಗಳ ಅಂತರದ ನಂತರ ನಾನು ನನ್ನ ಕುಟುಂಬದೊಂದಿಗೆ ಥಿಯೇಟರ್‌ನಲ್ಲಿ ಚಲನಚಿತ್ರವನ್ನು ನೋಡಿದ್ದೇನೆ. ನಾವು ಚಿತ್ರದ ಕಲಾವಿದರು ಮತ್ತು ನಿರ್ಮಾಪಕರ ಜತೆಗೆ ಥಿಯೇಟರ್‌ನ ಕೊನೆಯ ಸಾಲಿನಲ್ಲಿ ಕುಳಿತಿದ್ದರಿಂದ ನಮ್ಮ ಕುಟುಂಬಕ್ಕೆ ಇದು ತುಂಬಾ ವಿಶೇಷವಾದ ದಿನವಾಗಿದೆ” ಎಂದು ಅಮಿತ್ ಶಾ ಸಂತಸ ವ್ಯಕ್ತಪಡಿಸಿದರು. ಈ ಚಲನಚಿತ್ರವು ರಾಜಕೀಯ ಶಕ್ತಿಯನ್ನು ಮತ್ತು ಮಧ್ಯಕಾಲೀನ ಅವಧಿಯಲ್ಲಿ ಮಹಿಳೆಯರಿಗಿದ್ದ ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಿಂಬಿಸುತ್ತದೆ ಎಂದು ಶಾ ಹೇಳಿದರು.

ಬಿಡುಗಡೆ ವಿಳಂಬ: ಈ ಮೊದಲು ಈ ಚಿತ್ರವನ್ನು 2019ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ನಾನಾ ಕಾರಣಗಳಿಂದ ವಿಳಂಬ ಉಂಟಾಗಿ ಚಿತ್ರೀಕರಣವನ್ನು ಮುಂದೂಡಲಾಗಿತ್ತು.

ಅಕ್ಷಯ್ ಕುಮಾರ್ ಕಿಡಿನುಡಿ: ಈ ನಡುವೆ, ಇತಿಹಾಸದ ಪುಸ್ತಕಗಳ ಬಗ್ಗೆ ಅಕ್ಷಯ್‌ ಕುಮಾರ್ ನೀಡಿರುವ ಹೇಳಿಕೆ ಬಗ್ಗೆಯೂ ಈಗ ಚರ್ಚೆ ಶುರುವಾಗಿದೆ. ”ದುರದೃಷ್ಟವಶಾತ್ ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಬಗ್ಗೆ ಎರಡು-ಮೂರು ಸಾಲುಗಳು ಮಾತ್ರ ಇವೆ. ಆದರೆ ಆಕ್ರಮಣಕಾರರ ಬಗ್ಗೆ ಸಾಕಷ್ಟು ಪ್ರಸ್ತಾಪಿಸಲಾಗಿದೆ. ನಮ್ಮ ಸಂಸ್ಕೃತಿ ಮತ್ತು ನಮ್ಮ ಮಹಾರಾಜರ ಬಗ್ಗೆ ಏನೂ ಇಲ್ಲ ಎಂದು ಅಕ್ಷಯ್‌ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ | Kerala State Film Award: ಜೋಜು ಜಾರ್ಜ್‌ ಮತ್ತು ಬಿಜು ಮೆನೋನ್‌ ಅತ್ಯುತ್ತಮ ನಟರು

Exit mobile version