Site icon Vistara News

Union Budget 2024: ಯುವಜನ, ಉದ್ಯೋಗ, ಉದ್ದಿಮೆಯೇ ಫೋಕಸ್‌; ಇಲ್ಲಿದೆ ಕೇಂದ್ರ ಬಜೆಟ್‌ನ ಸಮಗ್ರ ಚಿತ್ರಣ

Union Budget 2024

Tax To Jobs, Agriculture To Defence: Here Is The Complete Information About Union Budget 2024

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪಷ್ಟ ಬಹುಮತ ಪಡೆದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಜೆಟ್‌ಅನ್ನು ಜನರ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಏಳನೇ ಬಾರಿಗೆ ಬಜೆಟ್‌ (Union Budget 2024) ಮಂಡಿಸಿದ್ದು, ಯುವ ಜನರಿಗೆ ಉದ್ಯೋಗ, ಯುವತಿಯರ ಕೌಶಲ ಅಭಿವೃದ್ಧಿ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಉದ್ಯಮಿಗಳಿಗೆ ನೆರವು ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಕೆಲವು ಕ್ಷೇತ್ರಗಳ ಕಡೆಗಣನೆ ಆರೋಪದ ಹೊರತಾಗಿಯೂ ನಿರ್ಮಲಾ ಅವರು ಸಮತೋಲಿತ ಬಜೆಟ್‌ ಮಂಡಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉದ್ಯೋಗ ಸೃಷ್ಟಿಯ ಕೂಗು ಹೆಚ್ಚಾಗಿ ಕೇಳುತ್ತಿತ್ತು. ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ, ನೀಡಿದ ಭರವಸೆಯನ್ನು ಮೋದಿ ಈಡೇರಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಇವೆ. ಹಾಗಾಗಿ, ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಿದೆ. ಆ ಮೂಲಕ, ಪ್ರತಿಪಕ್ಷಗಳ ಆರೋಪ, ಜನರ ಭಾವನೆಯನ್ನು ಬದಲಾಯಿಸಲು ಯತ್ನಿಸಿದೆ. ‌

Vistara editorial

ದೇಶದ 500 ಅಗ್ರ ಕಂಪನಿಗಳಲ್ಲಿ ಮುಂದಿನ 5 ವರ್ಷದಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌, ಅವರಿಗೆ ಪ್ರತಿ ತಿಂಗಳು 5 ಸಾವಿರ ರೂ. ಅಲೋವೆನ್ಸ್‌ (ಭತ್ಯೆ), ಉನ್ನತ ಶಿಕ್ಷಣ ಪಡೆಯುವವರಿಗೆ ಸಾಲ ಸೌಲಭ್ಯ ಸೇರಿ ಮುಂದಿನ 5 ವರ್ಷದಲ್ಲಿ 4.1 ಕೋಟಿ ಜನರಿಗೆ ಉದ್ಯೋಗ ನೀಡುವ ದಿಸೆಯಲ್ಲಿ 2 ಲಕ್ಷ ಕೋಟಿ ರೂ. ಪ್ಯಾಕೇಜ್‌ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಯುವಕ-ಯುವತಿಯರಿಗೆ ಉದ್ಯೋಗ ಕೊಡಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆ ಎನಿಸಿದೆ.

ಉದ್ಯಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ

ಯುವಕರು ಸೇರಿ ಕೋಟ್ಯಂತರ ಮಂದಿಗೆ ಉದ್ಯೋಗ ನೀಡುವಲ್ಲಿ ಉದ್ಯಮಗಳ ಪಾತ್ರ ಪ್ರಮುಖವಾಗಿದ್ದು, ಉದ್ಯಮಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ಕಾರ್ಪೊರೇಟ್‌ ಟ್ಯಾಕ್ಸ್‌ಅನ್ನು ಶೇ.40ರಿಂದ ಶೇ.35ಕ್ಕೆ ಇಳಿಸಿರುವುದು, ಎಂಎಸ್‌ಎಂಇಗಳಿಗೆ ಹಣಕಾಸು ನೆರವು, ಮುದ್ರಾ ಯೋಜನೆಯ ಸಾಲದ ಮೊತ್ತವನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆ ಮಾಡಿರುವುದು ಪ್ರಮುಖ ಸಂಗತಿಗಳಾಗಿವೆ.

ಕೃಷಿ ಋಷಿಗಳ ಏಳಿಗೆಗೆ 1.52 ಲಕ್ಷ ಕೋಟಿ ರೂ.

ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ದೇಶಾದ್ಯಂತ 10,000 ಜೈವಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​ನಲ್ಲಿ ಭರವಸೆ ನೀಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ, 1 ಕೋಟಿ ರೈತರನ್ನು ಬ್ರ್ಯಾಂಡಿಂಗ್ ಮತ್ತು ಪ್ರಮಾಣೀಕರಣ ನೀಡುವ ಮೂಲಕ ನೈಸರ್ಗಿಕ ಕೃಷಿಗೆ ಪ್ರೇರಣೆ ನೀಡಲಾಗುವುದು ಎಂದು ಅವರು ಬಜೆಟ್​ನಲ್ಲಿ ಹೇಳಿದ್ದಾರೆ.‌

Vistara editorial

ತರಕಾರಿ ಬೆಳೆಗಳನ್ನು ಜೀವನಾಧಾರವಾಗಿ ಮಾಡಿಕೊಂಡಿರುವ ರೈತರಿಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ
ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ಮಿಸುವ ಯೋಜನೆ ಪ್ರಕಟಿಸಿದ್ದಾರೆ. ಅದೇ ರೀತಿ ಮಾರುಕಟ್ಟೆಗೆಳ ಕೇಂದ್ರಗಳ ಹತ್ತಿರ ದೊಡ್ಡ ಕ್ಲಸ್ಟರ್​ಗಳನ್ನು ನಿರ್ಮಿಸುವ ಭರವಸೆಯನ್ನು ಕೊಟ್ಟಿದ್ದಾರೆ. ಮೀನು ಸಾಕಣೆದಾರರ ಅಭಿವೃದ್ಧಿಗಾಗಿ ಸಿಗಡಿ ಸಂತಾನೋತ್ಪತ್ತಿ ಕೇಂದ್ರಗಳಿಗೆ ಆರ್ಥಿಕ ನೆರವು ನೀಡಲಾಗುವುದ ಎಂದು ಹಣಕಾಸು ಸಚಿವರು ಭರವಸೆ ಕೊಟ್ಟಿದ್ದಾರೆ. ಅದೇ ರೀತಿ ನಬಾರ್ಡ್ ಮೂಲಕ ಸಿಗಡಿಗಳ ರಫ್ತಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಧಾರ್ಮಿಕ ಕೇಂದ್ರಗಳಿಗೂ ಆದ್ಯತೆ

ಕೇಂದ್ರ ಬಜೆಟ್‌ನಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ಮಾದರಿಯಲ್ಲಿ ಬಿಹಾರದ ಗಯಾದಲ್ಲಿರುವ ವಿಷ್ಣುಪಾದ ದೇವಾಲಯ (Vishnupad Temple) ಮತ್ತು ಮಹಾಬೋಧಿ (Mahabodhi Temple) ದೇಗುಲಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ವಿಷ್ಣುಪಾದ ದೇಗುಲ ಅತ್ಯಂತ ಪ್ರಾಚೀನ ದೇಗುಲ ಫಾಲ್ಗು ನದಿ ದಡದಲ್ಲಿರುವ ಭಗವಾನ್‌ ವಿಷ್ಣುವಿನ ದೇಗುವಲವಾಗಿದೆ. ಬೋಧ್‌ ಗಯಾದಲ್ಲಿರುವ ಮಹಾಬೋಧಿ ದೇಗುಲವಿಶ್ವ ಪಾರಂಪರಿಕಾ ಸ್ಥಳವೆಂದು ಯುನೆಸ್ಕೋ ಗುರುತಿಸಿದೆ.

Vistara editorial

ಆಂಧ್ರ, ಬಿಹಾರಕ್ಕೆ ಬಂಪರ್‌, ಕರ್ನಾಟಕಕ್ಕೆ ಶೂನ್ಯ ಕೊಡುಗೆ

ಹೈದರಾಬಾದ್‌-ಬೆಂಗಳೂರು ಮಧ್ಯೆ ಇಂಡಸ್ಟ್ರಿಯಲ್‌ ಕಾರಿಡಾರ್‌ ಸ್ಥಾಪನೆಯನ್ನು ಹೊರತುಪಡಿಸಿದರೆ, ಕರ್ನಾಟಕ ಹಾಗೂ ಬೆಂಗಳೂರಿನ ಕುರಿತು ಇಡೀ ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಆಡಳಿತವಿರುವ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ಗಮನ ಹರಿಸಿರುವ ಕೇಂದ್ರ ಸರ್ಕಾರವು, ಕರ್ನಾಟಕದ ಕಡೆಯೇ ಗಮನವೇ ಹರಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು, ರಸ್ತೆ ನಿರ್ಮಾಣ ಸೇರಿ ಯಾವುದೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ.

Vistara editorial

ತೆರಿಗೆ ಭಾರ ಅಲ್ಪ ಇಳಿಕೆ

ತೆರಿಗೆ ಪಾವತಿಸುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು, ಹೊಸ ಸ್ಲ್ಯಾಬ್‌ಗಳ ಪರಿಚಯದಿಂದ ತೆರಿಗೆದಾರರು 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಘೋಷಿಸಿದ್ದಾರೆ. ಆದರೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಲ್ಲದೆ, ಏಂಜೆಲ್ ತೆರಿಗೆಯನ್ನು ರದ್ದುಪಡಿಸುವುದು ಸ್ಟಾರ್ಟ್ಅಪ್ ಸಮುದಾಯಕ್ಕೆ ಸಕಾರಾತ್ಮಕ ಬೆಳವಣಿಗೆ. ಇದು ನಿಧಿಸಂಗ್ರಹಕ್ಕೆ ಹೆಚ್ಚು ಬೆಂಬಲ ಮತ್ತು ಕಡಿಮೆ ನಿರ್ಬಂಧಿತ ವಾತಾವರಣ ನಿವಾರಿಸುತ್ತದೆ. ಈ ಬದಲಾವಣೆಯೊಂದಿಗೆ, ಭಾರತದಲ್ಲಿ ನಾವೀನ್ಯತೆ ಮತ್ತು ಹೂಡಿಕೆಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಚಿನ್ನ, ಬೆಳ್ಳಿ ಆಗಲಿದೆ ಅಗ್ಗ

ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಬೆಲೆಯು ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. ಪ್ಲಾಟಿನಮ್‌ ಮೇಲಿನ ಕಸ್ಟಮ್‌ ಸುಂಕವನ್ನು ಕೂಡ ಶೇ.6.4ರಷ್ಟು ಇಳಿಕೆ ಮಾಡಲಾಗಿದೆ. ಕಸ್ಟಮ್ಸ್‌ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್‌ ಉಪಕರಣಗಳು, ಮೂರು ಕ್ಯಾನ್ಸರ್‌ ಔಷಧಿಗಳನ್ನು ಕಸ್ಟಮ್ಸ್‌ ಸುಂಕದಿಂದ ಮುಕ್ತಗೊಳಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಶೇ.15ರಷ್ಟು ಕಸ್ಟಮ್ಸ್‌ ಸುಂಕವನ್ನು ಇಳಿಸಿದೆ. ಆಮದು ಮಾಡಿಕೊಳ್ಳುವ ಮೊಬೈಲ್‌, ಮೊಬೈಲ್ ಬಿಡಿ ಭಾಗಗಳ ಮೇಲಿನ ಸುಂಕವನ್ನೂ ಕೇಂದ್ರ ಸರ್ಕಾರ ಶೇ.15ರಷ್ಟು ಇಳಿಸಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ರಕ್ಷಣಾ ವೆಚ್ಚ ಮತ್ತಷ್ಟು ಹೆಚ್ಚಳ

ದೇಶದ ರಕ್ಷಣಾ ಕ್ಷೇತ್ರವನ್ನು ಸುಭದ್ರಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ರಕ್ಷಣಾ ವೆಚ್ಚವನ್ನು ಕಳೆದ ವರ್ಷಕ್ಕಿಂತ ಏರಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರವು ರಕ್ಷಣಾ ವೆಚ್ಚಕ್ಕೆ 5.94 ಲಕ್ಷ ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಈ ಬಾರಿ ಮೊತ್ತವನ್ನು 6.21 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿದೆ. ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ, ದೇಶೀಯವಾಗಿ ರಕ್ಷಣಾ ಉಪಕರಣಗಳ ಉತ್ಪಾದನೆ, ರಕ್ಷಣಾ ರಫ್ತು ಸೇರಿ ಹಲವು ವಿಭಾಗಗಳಿಗೆ ಉತ್ತೇಜನ ನೀಡಲಾಗಿದೆ.

Vistara editorial

ರೈಲ್ವೆ ಕ್ಷೇತ್ರಕ್ಕಿಲ್ಲ ಹೆಚ್ಚಿನ ಪ್ರಾಮುಖ್ಯತೆ

ಒಂದು ಕಾಲದಲ್ಲಿ ರೈಲ್ವೆಗಾಗಿಯೇ ಪ್ರತ್ಯೇಕ ಬಜೆಟ್‌ ಮಂಡಿಸಲಾಗುತ್ತಿತ್ತು. ಕೇಂದ್ರ ಸರ್ಕಾರವು ರೈಲ್ವೆ ಬಜೆಟ್‌ಅನ್ನೂ ಸಾಮಾನ್ಯ ಬಜೆಟ್‌ನಲ್ಲೇ ಘೋಷಿಸುತ್ತಿದೆ. ಈ ಬಾರಿ ಸಾಮಾನ್ಯ ಬಜೆಟ್‌ನಲ್ಲೂ ರೈಲ್ವೆ ಕ್ಷೇತ್ರಕ್ಕೆ ಯಾವುದೇ ಮಹತ್ವದ ಘೋಷಣೆ ಮಾಡದಿರುವುದು ಟೀಕೆ ಹಾಗೂ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: Union Budget 2024: ಇನ್ನೊಂದು ವರ್ಷದಲ್ಲಿ ಹಳೇ ತೆರಿಗೆ ಪದ್ಧತಿ ರದ್ದು? ಕೇಂದ್ರ ವಿತ್ತ ಸಚಿವೆ ಹೇಳಿದ್ದಿಷ್ಟು

Exit mobile version