Site icon Vistara News

ವಿಮಾನ ನಿಲ್ದಾಣದಲ್ಲೇ ಇಂಡಿಗೋ, ಏರ್‌ ಇಂಡಿಯಾ ವಿಮಾನ ಡಿಕ್ಕಿ; ಪ್ರಯಾಣಿಕರಿಗೆ ಶಾಕ್!

Air India IndiGo Flights

Taxiing IndiGo plane hits Air India Express aircraft at Kolkata Airport, DGCA orders probe

ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ (Kolkata Airport) ಭಾರಿ ದುರಂತವೊಂದು ತಪ್ಪಿದೆ. ವಿಮಾನ ನಿಲ್ದಾಣದಲ್ಲಿ ಬುಧವಾರ (ಮಾರ್ಚ್‌ 27) ಇಂಡಿಗೋ (IndiGo Flight) ಹಾಗೂ ಏರ್‌ ಇಂಡಿಯಾ ವಿಮಾನಗಳು (Air India Flight) ಡಿಕ್ಕಿಯಾಗಿದ್ದು, ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಎರಡೂ ವಿಮಾನಗಳ ರೆಕ್ಕೆಗಳು ಡಿಕ್ಕಿಯಾಗಿದ್ದು, ಕೆಲ ಕಾಲ ಪ್ರಯಾಣಿಕರು ಆತಂಕದಲ್ಲಿದ್ದರು ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಚೆನ್ನೈಗೆ ಹೊರಟ್ಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ರೆಕ್ಕೆಗಳಿಗೆ ಬಿಹಾರದ ದರ್ಭಾಂಗಕ್ಕೆ ಹೊರಟಿದ್ದ ವಿಮಾನದ ರೆಕ್ಕೆಯು ಬಡಿದಿದೆ. ಇದರಿಂದಾಗಿ ರನ್‌ವೇನಲ್ಲಿಯೇ ಏರ್‌ ಇಂಡಿಯಾ ರೆಕ್ಕೆಯ ತುಣುಕೊಂದು ಬಿದ್ದಿದೆ. ಡಿಕ್ಕಿಯ ರಭಸವು ತೀವ್ರವಾಗಿರದಿದ್ದರೂ, ಪ್ರಯಾಣಿಕರು ಆತಂಕ್ಕೀಡಾಗಿದ್ದರು. ಇದರಿಂದಾಗಿ ಕೆಲ ವಿಮಾನಗಳ ಸಂಚಾರವೂ ವಿಳಂಬವಾಯಿತು ಎಂದು ತಿಳಿದುಬಂದಿದೆ. ಆದಾಗ್ಯೂ, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತನಿಖೆಗೆ ಆದೇಶಿಸಿದ ಡಿಜಿಸಿಎ

ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ರೆಕ್ಕೆಗಳು ಡಿಕ್ಕಿಯಾಗಿರುವ ಕುರಿತು ಸಮಗ್ರ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಆದೇಶಿಸಿದೆ. “ಎರಡೂ ವಿಮಾನಗಳ ಪೈಲಟ್‌ಗಳು ಹಾಗೂ ರನ್‌ ವೇ ಸಿಬ್ಬಂದಿಯನ್ನು ತನಿಖೆ ನಡೆಸಲು ಆದೇಶಿಸಲಾಗಿದೆ. ಎರಡೂ ವಿಮಾನಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. ತನಿಖೆಯ ವರದಿ ಬಂದ ಬಳಿಕ ಕ್ರಮದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Russian Military Plane: ರಕ್ಷಣಾ ಸಚಿವಾಲಯದ ವಿಮಾನ ಪತನ; 15 ಮಂದಿಯ ದಾರುಣ ಸಾವು

“ಕೋಲ್ಕೊತಾ ವಿಮಾನ ನಿಲ್ದಾಣದ ರನ್‌ವೇ ಪ್ರವೇಶಿಸಲು ಅನುಮತಿಗಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕಾಯುತ್ತಿತ್ತು. ಇದೇ ವೇಳೆ ಇಂಡಿಗೋ ವಿಮಾನದ ರೆಕ್ಕೆಯು ನಮ್ಮ ವಿಮಾನಕ್ಕೆ ಬಡಿದಿದೆ. ನಮ್ಮ ವಿಮಾನದ ರೆಕ್ಕೆಯು ತುಂಡಾಗಿ ರನ್‌ವೇನಲ್ಲಿ ಬಿದ್ದಿದೆ. ಪ್ರಕರಣದ ಕುರಿತು ನಾವೂ ಕೂಡ ತನಿಖೆ ನಡೆಸುತ್ತಿದ್ದೇವೆ. ಹಾಗೆಯೇ, ಡಿಜಿಸಿಎ ಅಧಿಕಾರಿಗಳ ತನಿಖೆಗೂ ಸಹಕಾರ ನೀಡುತ್ತಿದ್ದೇವೆ. ಇನ್ನು, ಅಪಘಾತ ಹಾಗೂ ವಿಮಾನ ಪ್ರಯಾಣದ ವ್ಯತ್ಯಯಕ್ಕಾಗಿ ಪ್ರಯಾಣಿಕರ ಕ್ಷಮೆಯಾಚಿಸುತ್ತೇವೆ” ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version