ನವದೆಹಲಿ: ತೆಲುಗು ದೇಶ ಪಾರ್ಟಿ(ಟಿಡಿಪಿ) ನಾಯಕ ಚಂದ್ರಬಾಬು ನಾಯ್ಡು (TDP Leader chandrababu naidu) ಅವರ ಬಂಧನ ಖಂಡಿಸಿ, ಸೆಪ್ಟೆಂಬರ್ 11ರಂದು ಟಿಡಿಪಿ ಆಂಧ್ರ ಪ್ರದೇಶ ಬಂದ್ (Andhra Bandh) ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ, ಗುಂಟೂರು, ಕಡಪಾ, ಪೂರ್ವ ಗೋದಾವರಿ ಸೇರಿದಂತೆ ಆಂಧ್ರ ಪ್ರದೇಶದ ಹಲವಡೆ ಪರಿಸ್ಥಿತಿ ಉದ್ವೀಗ್ನಗೊಂಡಿದೆ. ಟಿಡಿಪಿ ಈ ಕಾರ್ಯಕರ್ತರು ಬಹುತೇಕ ಬಂದ್ ಭಾಗವಾಗಿ, ಬಸ್ ಸಂಚಾರವನ್ನು ತಡೆದರು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಟಿಡಿಪಿ ಕರೆ ನೀಡಿರುವ ಈ ಬಂದ್‌ಗೆ ಕಮ್ಯುನಿಸ್ಟ್ ಪಾರ್ಟಿ (Communist Party) ಮತ್ತು ನಟ ಪವನ್ ಕಲ್ಯಾಣ್ ಅವರ ಜನ ಸೇನಾ ಪಾರ್ಟಿ (Jan Sena Party) ಬೆಂಬಲ ನೀಡಿವೆ.
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಆಂಧ್ರ ಪ್ರದೇಶ ಪೊಲೀಸರು ನಿಷೇಧಾಜ್ಞೆಯನ್ನು ಹೊರಡಿಸಿದ್ದಾರೆ. ಬಂಧಿತ ಚಂದ್ರಬಾಬು ನಾಯ್ಡು ಅವರನ್ನು ಇರಿಸಾಲಗಿರುವ ರಾಜಮುಂಡ್ರೆ ಸೆಂಟ್ರಲ್ ಜೈಲ್ ಇರುವ ಈಸ್ಟ್ ಗೋದಾವರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ರ್ಯಾಲಿ ಮತ್ತು ಸಭೆಗಳನ್ನು ನಿರ್ಬಂಧಿಸಲಾಗಿದೆ.
ರಾಜ್ಯದಾದ್ಯಂತ ಟಿಡಿಪಿ ಬೆಂಬಲಿಗರು ಬೀದಿಗಿಳಿದ ಪ್ರತಿಭಟನೆ ನಡೆಸಿದರು. ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವಾದ ಕುಪ್ಪಂನಲ್ಲಿ ಟಿಡಿಪಿ ಕಾರ್ಯಕರ್ತರು, ಬಸ್ಸನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಸ್ ಧ್ವಂಸಗೊಳಿಸಿದ್ದಾರೆ. ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ಹಲವು ಪಕ್ಷದ ಕಾರ್ಯಕರ್ತರು ರಸ್ತೆಗಿಳಿದು ಸಂಚಾರ ತಡೆ ನಡೆಸಿದರು. ತರಗತಿಗಳು ನಡೆಯುತ್ತಿದ್ದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಯತ್ನಿಸಿದರು.
ಈ ಮಧ್ಯೆ ಪೊಲೀಸರು ಮತ್ತು ಡಿಟಿಪಿ ಕಾರ್ಯರ್ತರ ನಡುವೆ ಹಲವೆಡೆ ಮಾತಿನ ಚಕಮಕಿಗಳು ನಡೆದ ಘಟನೆಗಳು ವರದಿಯಾಗಿವೆ. ಕೆಲವರು ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಏರಿ ಪ್ರತಿಭಟನೆ ನಡೆಸಿದರು. ಆಂಧ್ರ ಸಿಎಂ ವೈ ಎಸ್ ಜಗನ್‌ಮೋಹನ್ ರೆಡ್ಡಿ ವಿರುದ್ದ ಘೋಷಣೆ ಕೂಗಿದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಪೊಲೀಸರು ಮಧ್ಯೆ ಮಾತಿನ ಚಕಮಕಿ ನಡೆಯಿತು.
ಹಲವರು ಅರೆಸ್ಟ್, ಕೆಲವರಿಗೆ ಗೃಹ ಬಂಧನ
ಮತ್ತೊಂದೆಡೆ, ಶ್ರೀಕಾಕುಳಂ ಟಿಡಿಪಿ ಕಾರ್ಯಕರ್ತರು, ಚಂದ್ರಬಾಬು ನಾಯ್ಡು ಅವರು ಬಿಡುಗಡೆಯಾಗೋವರೆಗೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಅಯ್ಯಣ್ಣ ಪತ್ರುಡು, ಪಳ್ಳ ಶ್ರೀನಿವಾಸ್ ರಾವ್, ಕೊಳ್ಳು ರವೀಂದ್ರ ಸೇರಿದಂತೆ ಟಿಡಿಪಿಯ ಅನೇಕ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಹಲವು ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಟಿಡಿಪಿಯ ಮಾಜಿ ಸಚಿವೆ ಪರಿಟಾಲ ಸುನಿತಾ ಅವರು ಶ್ರೀ ಸತ್ಯಸಾಯಿ ಜಿಲ್ಲೆಯ ರಾಮಗಿರಿ ಮಂಡಲದಲ್ಲಿ ಪಕ್ಷದ ಇತರ ಕಾರ್ಯಕರ್ತರೊಂದಿಗೆ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು, ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕಡಪಾದಲ್ಲಿ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ವಾಗ್ವಾದದ ವೇಳೆ ಪ್ರದ್ದತ್ತೂರು ಮಾಜಿ ಶಾಸಕ ನಂದ್ಯಾಲ ವರದ ರಾಜುಲು ರೆಡ್ಡಿ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ: Chandrababu Naidu: ಆಂಧ್ರದಲ್ಲಿ ಹೈಡ್ರಾಮಾ; ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ, ಏನಿದು ಕೇಸ್?
ಚಂದ್ರಬಾಬು ನಾಯ್ಡು ಅರೆಸ್ಟ್ ಆಗಿದ್ದೇಕೆ?
ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಸಿಐಡಿ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9ರಂದು ಬಂಧಿಸಿತ್ತು. ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಕೋರ್ಟ್ ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.