ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರಿ ನೀಡಿರುವ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಬಿಜೆಪಿ ಹಾಗೂ ತೆಲುಗು ದೇಶಂ ಪಕ್ಷವು (TDP) ಮೈತ್ರಿ (BJP TDP Alliance) ಮಾಡಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ. ಅದರಲ್ಲೂ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿದ್ದು, ಶುಕ್ರವಾರವೇ (ಮಾರ್ಚ್ 8) ಮೈತ್ರಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿ, ಶೀಘ್ರವೇ ಸೀಟು ಹಂಚಿಕೆ ಸೇರಿ ಹಲವು ವಿಷಯಗಳ ಕುರಿತು ಚಂದ್ರಬಾಬು ನಾಯ್ಡು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಕ್ಷೇತ್ರಗಳಿದ್ದು, ಉಭಯ ಪಕ್ಷಗಳು ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನಕ್ಕೆ ಬರಬೇಕಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಕೂಡ ಟಿಡಿಪಿಯು ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. 2018ರಲ್ಲಿ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಸಿಎಂ ಆಗಿದ್ದಾಗ ಎನ್‌ಡಿಎ ತೊರೆದಿದ್ದರು.
Telugu Desam Party President N Chandrababu Naidu met Union Home Minister Amit Shah and BJP chief JP Nadda in Delhi (07/03) pic.twitter.com/C3LWe3sNjo
— ANI (@ANI) March 7, 2024
ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ಹಾಗೂ ಬಿಜೆಪಿ ಮಧ್ಯೆ ಮೈತ್ರಿ ಕುರಿತು ಕೂಡ ಮಾತುಕತೆ ನಡೆಯುತ್ತಿದ್ದು, ಇದರ ಬಗ್ಗೆಯೂ ಶುಕ್ರವಾರ ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸುಮಾರು 15 ವರ್ಷಗಳ ಬಳಿಕ ಕೇಂದ್ರದಲ್ಲಿ ಎನ್‌ಡಿಎ ಜತೆ ಕೈಜೋಡಿಸಲು ನವೀನ್ ಪಟ್ನಾಯಕ್ ಅವರು ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರಕ್ಕೂ ಸಂಪೂರ್ಣ ನೆರವು ನೀಡುವುದಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rahul Gandhi: ವಯನಾಡಿನಿಂದಲೇ ರಾಹುಲ್ ಗಾಂಧಿ ಸ್ಪರ್ಧೆ; ಕಾಂಗ್ರೆಸ್ ಸಿಇಸಿ ತೀರ್ಮಾನ
ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ ಸೇರಿ ಹಲವು ನಾಯಕರು ಕಾಂಗ್ರೆಸ್ ಕೇಂದ್ರೀಯ ಚುನಾವಣೆ ಸಮಿತಿ ಸಭೆ ನಡೆಸಿದ್ದು, ಶುಕ್ರವಾರವೇ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಕರ್ನಾಟಕದ 11 ಹಾಗೂ ತೆಲಂಗಾಣದ 7 ಲೋಕಸಭೆ ಕ್ಷೇತ್ರಗಳು ಸೇರಿ ಒಟ್ಟು 40 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಶುಕ್ರವಾರ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ