Site icon Vistara News

ಮಹಾ ಪಾಲಿಟಿಕ್ಸ್‌ | ಉದ್ಧವ್‌ ಬಣದ ಎಲ್ಲರಿಗೂ ಅನರ್ಹತೆ ನೋಟಿಸ್‌ ನೀಡಿದ ಶಿಂಧೆ ಬಣ, ಆದಿತ್ಯ ಠಾಕ್ರೆಗೆ ಇಲ್ಲ!

Uddhav Thackeray and aditya

ಮುಂಬಯಿ: ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ (ಶಿಂಧೆ ಬಣ) ನೀಡಿದ ವಿಪ್‌ ಉಲ್ಲಂಘಿಸಿದ ಉದ್ಧವ್‌ ಬಣದ ಎಲ್ಲ ಶಾಸಕರ ಅನರ್ಹತೆಗೆ ನೋಟಿಸ್‌ ನೀಡಲಾಗಿದೆ. ಆದರೆ ಆದಿತ್ಯ ಠಾಕ್ರೆ ಅವರಿಗೆ ನೀಡಲಾಗಿಲ್ಲ.

ಬಾಳಾ ಠಾಕ್ರೆ ಅವರ ಮೇಲಿನ ಗೌರವದಿಂದಾಗಿ ಆದಿತ್ಯ ಅವರಿಗೆ ಅನರ್ಹತೆ ನೋಟಿಸ್‌ ನೀಡಿಲ್ಲ. ಈ ಕುರಿತು ಮುಖ್ಯಮಂತ್ರಿ ಏಕನಾಥ ಶಿಂಧೆ ತೀರ್ಮಾನಿಸಲಿದ್ದಾರೆ ಎಂದು ಶಿಂಧೆ ನೇತೃತ್ವದ ಶಿವಸೇನಾ ಬಣದ ಮುಖ್ಯ ಸಚೇತಕ ಭರತ್ ಗೊಗವಾಲೆ ಹೇಳಿದ್ದಾರೆ.

ವಿಶ್ವಾಸ ಮತದ ಸಂದರ್ಭದಲ್ಲಿ ವಿಪ್ ಅನ್ನು ಧಿಕ್ಕರಿಸಿದ ಎಲ್ಲಾ ಶಿವಸೇನೆ ಶಾಸಕರನ್ನು ಅನರ್ಹಗೊಳಿಸಲು ಸೋಮವಾರ ನೋಟಿಸ್‌ ನೀಡಲಾಗಿದೆ. ಆದರೆ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಗೌರವಾರ್ಥವಾಗಿ ಮಾಜಿ ಸಚಿವ ಮತ್ತು ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಈ ಬಗ್ಗೆ ಶಿಂಧೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ ಅವರು.

ಸೋಮವಾರ ಮುಂಜಾನೆ 288 ಸದಸ್ಯ ಬಲದ ಸದನದಲ್ಲಿ ಶಿಂಧೆ ನಿರೀಕ್ಷೆಯಂತೆ ವಿಶ್ವಾಸಮತ ಗೆದ್ದುಕೊಂಡಿದ್ದರು. 164 ಶಾಸಕರು ಅವರ ಪರವಾಗಿ ಮತ ಚಲಾಯಿಸಿದರು ಮತ್ತು 99 ಮಂದಿ ಅವರ ವಿರುದ್ಧ ಮತ ಚಲಾಯಿಸಿದ್ದರು. ಮೂವರು ಶಾಸಕರು ಮತದಾನದಿಂದ ದೂರ ಉಳಿದರೆ, ಕಾಂಗ್ರೆಸ್‌ನ ಅಶೋಕ್ ಚವಾಣ್, ವಿಜಯ್ ವಾಡೆತ್ತಿವಾರ್ ಸೇರಿದಂತೆ 21 ಶಾಸಕರು ಗೈರು ಹಾಜರಾಗಿದ್ದರು.

ಈ ಮಧ್ಯೆ ಶಿಂಧೆ ನೇತೃತ್ವದ ಶಿವಸೇನಾ ಬಂಡುಕೋರರ ಹೊಸ ಪಕ್ಷದ ವಿಪ್ ಅನ್ನು ಮಾನ್ಯ ಮಾಡಿದ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿದ ಠಾಕ್ರೆ ಬಣದ ಮನವಿಯನ್ನು ಜುಲೈ 11ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಭಾನುವಾರ ತಡರಾತ್ರಿಯ ಬೆಳವಣಿಗೆಯಲ್ಲಿ, ಹೊಸದಾಗಿ ಚುನಾಯಿತರಾದ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಗೋಗವಾಲೆ ಅವರನ್ನು ಶಿವಸೇನೆಯ ಮುಖ್ಯ ಸಚೇತಕರಾಗಿ ಗುರುತಿಸಿ, ಠಾಕ್ರೆ ಬಣಕ್ಕೆ ಸೇರಿದ ಸುನಿಲ್ ಪ್ರಭು ಅವರನ್ನು ತೆಗೆದುಹಾಕಿದ್ದರು.

ಇದನ್ನೂ ಓದಿ: Maha politics: ಸಿಎಂ ಆಗಿ ವಿಶ್ವಾಸ ಮತ ಗೆದ್ದ ಏಕನಾಥ್‌ ಶಿಂಧೆ, 164 ಶಾಸಕರ ಬೆಂಬಲ, ಅಘಾಡಿಗೆ ಕೇವಲ 99

Exit mobile version