ಮುಂಬೈ, ಮಹಾರಾಷ್ಟ್ರ: ಆರ್ಥಿಕ ಹಿಂಜರಿತದ ಭೀತಿಯಲ್ಲಿ ಹಲವು ದೈತ್ಯ ಟೆಕ್ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಅದೇ ರೀತಿ, ಭಾರತದ ಪ್ರಖ್ಯಾತ ಟೆಕ್ ಕಂಪನಿ ಎನಿಸಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸ್(Tata Consultancy Services-TCS) ಉದ್ಯೋಗ ಕಡಿತ ಮಾಡಲಿದೆಯೇ ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಉದ್ಯೋಗ ಕಡಿತ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ(Tech Layoffs).
ಒಮ್ಮೆ ನೇಮಕ ಮಾಡಿಕೊಂಡರೆ ಉದ್ಯೋಗಿಯನ್ನು ದೀರ್ಘ ಅವಧಿಗೆ ಬೆಳವಣೆಗೆಯಾಗುವಂತೆ ರೂಪಿಸಲಾಗಿರುತ್ತದೆ. ಹಾಗಾಗಿ, ಉದ್ಯೋಗ ಕಡಿತದಲ್ಲಿ ನಂಬಿಕೆ ಇಲ್ಲ. ಜತೆಗೆ, ಕೆಲಸ ಕಳೆದುಕೊಂಡಿರುವ ಸ್ಟಾರ್ಟ್‌ಅಪ್ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಸ್ತಾಪವಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಅವರು ಪಿಟಿಐಗೆ ತಿಳಿಸಿದ್ದಾರೆ.
ನಾವು ಉದ್ಯೋಗಗಳನ್ನು ಕಡಿತ ಮಾಡುವುದಿಲ್ಲ. ಕಂಪನಿಯು ಪ್ರತಿಭೆಗಳನ್ನು ಬೆಳೆಸುವುದರಲ್ಲಿ ನಂಬಿಕೆ ಇಟ್ಟಿದೆ. ಹಾಗಾಗಿ, ಉದ್ಯೋಗ ಕಡಿತಗಳು ಇರುವುದಿಲ್ಲ ಎಂದು ಟಿಸಿಎಸ್ ಕಂಪನಿಯ ಎಚ್‌ಆರ್ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಅವರು ಉದ್ಯೋಗ ಕಡಿತ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: TCS Dividend | ಟಿಸಿಎಸ್‌ನಿಂದ ಪ್ರತಿ ಷೇರಿಗೆ 75 ರೂ. ಮಧ್ಯಂತರ ಡಿವಿಡೆಂಡ್ ಘೋಷಣೆ
ಅನೇಕ ಕಂಪನಿಗಳು ಅಗತ್ಯವಿಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಅನಿವಾರ್ಯವಾಗಿ ಆಗ ಉದ್ಯೋಗ ಕಡಿತ ಮಾಡಬೇಕಾಗುತ್ತದೆ. ಆದರೆ, ಟಿಸಿಎಸ್ ನಂಬಿಕೆ ಏನೆಂದರೆ, ಒಮ್ಮೆ ಉದ್ಯೋಗಿ ಕಂಪನಿ ಸೇರಿಕೊಂಡರೆ, ಆತನನ್ನು ಉತ್ಪಾದಕವಾಗಿಸುವುದು ಮತ್ತು ಮೌಲ್ಯವನ್ನು ಪಡೆಯುವುದು ಕಂಪನಿಯ ಜವಾಬ್ದಾರಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.