ಗಾಂಧಿನಗರ: ಕೊರೊನಾ ಸಾಂಕ್ರಾಮಿಕ ಪಿಡುಗಿನ ಬಳಿಕ ಹೃದಯಾಘಾತದಿಂದ (Heart Attack) ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಮೃತಪಡುತ್ತಿರುವ ಕುರಿತು ಚರ್ಚೆ, ಅಧ್ಯಯನ ನಡೆಯುತ್ತಿವೆ. ಇದರ ಬೆನ್ನಲ್ಲೇ, ಗುಜರಾತ್‌ನಲ್ಲಿ (Gujarat) ಬಾಲಕಿಯೊಬ್ಬಳು ಪರೀಕ್ಷಾ ಕೊಠಡಿಯಲ್ಲಿಯೇ ಕುಸಿದಿದ್ದು, ಹೃದಯ ಸ್ತಂಭನದಿಂದ (Cardiac Arrest) ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ರಾಜ್‌ಕೋಟ್‌ನ ಜಾಸ್ದೋನ್ ತಾಲೂಕಿನ ಸಾಕ್ಷಿ ರಾಜೋಸರ ಎಂಬ 9ನೇ ತರಗತಿ ವಿದ್ಯಾರ್ಥಿನಿಯು ಅಮ್ರೇಲಿ ಪಟ್ಟಣದ ಶಾಂತಾಬಾ ಗಜೇರಾ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯು ಶುಕ್ರವಾರ (ನವೆಂಬರ್ 3) ಪರೀಕ್ಷೆ ಬರೆಯಲೆಂದು ಉತ್ಸಾಹದಿಂದಲೇ ಪರೀಕ್ಷಾ ಕೋಠಡಿಗೆ ತೆರಳಿದ್ದಾಳೆ. ಆದರೆ, ಅಲ್ಲಿಯೇ ಆಕೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಬಾಲಕಿಯು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೊರೊನಾ ಬಳಿಕ ಹೆಚ್ಚಳ
ಕೊರೊನಾ ನಂತರ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಈಗಾಗಲೇ ಸಂಶೋಧನೆ (ICMR) ಆರಂಭಿಸಿದೆ. ಹಾಗೆಯೇ, ಕೊರೊನಾ ಪಿಡುಗಿನ ನಂತರ ಹೃದಯಾಘಾತಕ್ಕೀಡಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಐಸಿಎಂಆರ್ ತಜ್ಞರೇ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕೊರೊನಾ ತಗುಲಿ, ಐಸಿಯು, ವೆಂಟಿಲೇಟರ್ ಅಳವಡಿಕೆಯಂತಹ ಗಂಭೀರ ಪರಿಸ್ಥಿತಿಗೆ ತಲುಪಿದವರು ಭಾರದ ಕೆಲಸ ಮಾಡದಿರಿ ಎಂದು ಕೇಂದ್ರ ಸರ್ಕಾರ ಕೂಡ ಎಚ್ಚರಿಸಿದೆ.
ಕೊರೊನಾ ಸೋಂಕು ತಗುಲಿ, ನಂತರ ಗುಣಮುಖರಾದವರಲ್ಲಿ ಪ್ರಮಾಣ ಜಾಸ್ತಿ ಇದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಕೊರೊನಾ ಲಸಿಕೆಯಿಂದಲೂ ಹೃದಯಾಘಾತ ಆಗುತ್ತಿದೆಯೇ ಎಂಬ ಕುರಿತು ಕೂಡ ಐಸಿಎಂಆರ್ ತಜ್ಞರು ಸಂಶೋಧನೆ, ಅಧ್ಯಯನ ಆರಂಭಿಸಿದ್ದಾರೆ. ಇದರ ವರದಿ ಬಳಿಕವೇ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣ ಹೌದೋ, ಅಲ್ಲವೋ ಎಂಬುದು ತಿಳಿಯಲಿದೆ.
ಇದನ್ನೂ ಓದಿ: ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕ ಸಾವು; ಕುಳಿತಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ!
ಹೃದಯಾಘಾತ ಪ್ರಮಾಣ ಎಷ್ಟು ಏರಿಕೆ?
ಕೊರೊನಾ ಸೋಂಕಿನ ನಂತರದಲ್ಲಿ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣವು ಶೇ.30ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ