Site icon Vistara News

ಭಾರತ ವಿರೋಧಿ ಕೃತ್ಯಕ್ಕೆ ತಕ್ಕ ಶಾಸ್ತಿ; ಹುರ‍್ರಿಯತ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ

Amit Shah

Tehreek-e-Hurriyat banned by Centre for spreading anti-India propaganda

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಪ್ರತ್ಯೇಕವಾದಿ ಸಂಘಟನೆಯನ್ನು ನಿಷೇಧಿಸಿದೆ. ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಕೇಂದ್ರ ಸರ್ಕಾರವು (Central Government) ಜಮ್ಮು-ಕಾಶ್ಮೀರದ ತೆಹ್ರೀಕ್-ಎ-ಹುರ‍್ರಿಯತ್‌ (Tehreek-e-Hurriyat) ಪ್ರತ್ಯೇಕವಾದಿ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಕಣಿವೆ ಪ್ರತ್ಯೇಕವಾದಿ ಸೈಯದ್‌ ಅಲಿ ಶಾ ಗೀಲಾನಿ ಸ್ಥಾಪಿಸಿದ ತೆಹ್ರೀಕ್-ಎ-ಹುರ‍್ರಿಯತ್‌ಅನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ನಿಷೇಧಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಈ ಕುರಿತು ಮಾಹಿತಿ ನೀಡಿದ್ದಾರೆ. “ಯುಎಪಿಎ ಅಡಿಯಲ್ಲಿ ಜಮ್ಮು-ಕಾಶ್ಮೀರದ ತೆಹ್ರೀಕ್-ಎ-ಹುರ‍್ರಿಯತ್‌ ಸಂಘಟನೆಯನ್ನು ನಿಷೇಧಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಇಸ್ಲಾಮಿಕ್‌ ಆಡಳಿತ ಜಾರಿ, ಭಾರತ ವಿರೋಧಿ ಕೃತ್ಯಗಳಿಗೆ ಬೆಂಬಲ, ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ” ಎಂದು ಅಮಿತ್‌ ಶಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಭಾರತದಲ್ಲಿ ಉಗ್ರವಾದದ ವಿರುದ್ಧ ಕೇಂದ್ರ ಸರ್ಕಾರವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರವು ಭಾರತ ವಿರೋಧಿ ಚಟುವಟಿಕೆಗಳನ್ನು, ಉಗ್ರವಾದವನ್ನು ಸಹಿಸಿಕೊಳ್ಳುವುದಿಲ್ಲ. ಅಂತಹ ಸಂಘಟನೆಗಳನ್ನು ನಿಷೇಧಿಸದೆ ಬಿಡುವುದಿಲ್ಲ” ಎಂದು ಅಮಿತ್‌ ಶಾ ಹೇಳಿದ್ದಾರೆ. ತೆಹ್ರೀಕ್-ಎ-ಹುರ‍್ರಿಯತ್‌ ಸಂಘಟನೆ ಮೂಲಕ ಸೈಯದ್‌ ಅಲಿ ಶಾ ಗೀಲಾನಿ ಜೀವಂತವಾಗಿದ್ದಾಗ ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ. ಪ್ರತ್ಯೇಕವಾದಿಗಳ ಗುಂಪು ಕಟ್ಟಿಕೊಂಡು ಜಮ್ಮು-ಕಾಶ್ಮೀರದ ಗೋಡೆಗಳ ಮೇಲೆ ‘ಗೋ ಇಂಡಿಯಾ ಗೋ ಬ್ಯಾಕ್’‌ ಎಂಬ ಘೋಷಣೆಗಳನ್ನು ಬರೆಸುತ್ತಿದ್ದ. ಈಗ ಈ ಸಂಘಟನೆಯನ್ನು ಕೇಂದ್ರ ಸರ್ಕಾರ ಹೆಡೆಮುರಿಕಟ್ಟಿದೆ.

ಇದನ್ನೂ ಓದಿ: JNU Campus : ಜೆಎನ್​ಯು ಕ್ಯಾಂಪಸ್​ನಲ್ಲಿ ದೇಶ ವಿರೋಧಿ ಘೋಷಣೆ, ಪ್ರತಿಭಟನೆ ನಿಷೇಧ​!

ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರ ಮುಸ್ಲಿಂ ಲೀಗ್‌ನ ಮಸರತ್ ಆಲಂ ಬಣವನ್ನು(Masarat Alam faction Msulim league) ಐದು ವರ್ಷ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಘಟನೆ ಮತ್ತು ಅದರ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುವ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರವು ಯುಎಪಿಎ ಅಡಿಯಲ್ಲಿಯೇ ನಿಷೇಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version