Site icon Vistara News

ಬಿಹಾರ 2025ರ ಚುನಾವಣೆ ತೇಜಸ್ವಿ ಯಾದವ್​ ನೇತೃತ್ವದಲ್ಲಿ, ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಅಲ್ಲ: ಸಿಎಂ ನಿತೀಶ್​ ಕುಮಾರ್​

Nitish Kumar And Tejaswi Yadav

Nitish Kumar And Tejaswi Yadav

‘ಬಿಹಾರದಲ್ಲಿ 2025ರ ವಿಧಾನಸಭೆ ಚುನಾವಣೆ ಆರ್​​ಜೆಡಿ ನಾಯಕ ತೇಜಸ್ವಿ ಪ್ರಸಾದ್​ ಯಾದವ್ ನೇತೃತ್ವದಲ್ಲಿ ನಡೆಯಲಿದೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಮಂಗಳವಾರ ಹೇಳಿದ್ದಾರೆ. ಬಿಜೆಪಿಯ ಒಡೆದು ಆಳುವ ನೀತಿ ವಿರುದ್ಧ ಸಮರ ಸಾರಿ, ಎನ್​ಡಿಎ ಒಕ್ಕೂಟದಿಂದ ಹೊರಬಿದ್ದ ಜೆಡಿಯು ನಾಯಕ ನಿತೀಶ್​ ಕುಮಾರ್​ ಬಳಿಕ, ಆರ್​ಜೆಡಿಯೊಂದಿಗೆ ಸೇರಿ ಬಿಹಾರದಲ್ಲಿ ಮಹಾ ಘಟ್​ ಬಂಧನ್​ ಸರ್ಕಾರ ರಚನೆ ಮಾಡಿ ಮೂರ್ನಾಲ್ಕು ತಿಂಗಳಾಗಿದೆ. ನಿತೀಶ್​ ಕುಮಾರ್​ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಹುದ್ದೆ ಆಕಾಂಕ್ಷಿ ಎಂಬ ಮಾತೂ ಇದೆ.

ಇದೇ ಹೊತ್ತಲ್ಲಿ ನಿತೀಶ್​ ಕುಮಾರ್​ ಅವರು ಪದೇಪದೇ ತೇಜಸ್ವಿ ಯಾದವ್​ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ತೇಜಸ್ವಿಯೇ ಬಿಹಾರದ ಭವಿಷ್ಯದ ನಾಯಕ ಎಂದು ಒತ್ತಿ ಹೇಳುತ್ತಿದ್ದಾರೆ. ಇತ್ತೀಚೆಗೆ ನಳಂದಾ ಜಿಲ್ಲೆಯ ರಾಹುಯಿ ಎಂಬಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿತೀಶ್​ ಕುಮಾರ್​ ಆಗಲೂ ಇದೇ ಮಾತುಗಳನ್ನಾಡಿದ್ದರು. 2025ರ ವಿಧಾನಸಭಾ ಚುನಾವಣೆಯನ್ನು ಮಹಾಘಟ್​ ಬಂಧನ್​ ಮೈತ್ರಿ ತೇಜಸ್ವಿ ಯಾದವ್​ ನೇತೃತ್ವದಲ್ಲೇ ಎದುರಿಸಲಿದೆ ಎಂದು ಹೇಳಿದ್ದರು.

ಬಿಹಾರ ವಿಧಾನಸಭೆ ಚಳಿಗಾಲದ ಅಧಿವೇಶನ ಮಂಗಳವಾರದಿಂದ ಪ್ರಾರಂಭವಾಗಿದ್ದು, ಈ ಅಧಿವೇಶನದ ಮೊದಲ ದಿನವೇ ನಿತೀಶ್​ ಕುಮಾರ್​ ಹೀಗೆ ಹೇಳಿದ್ದಾರೆ. ಅಷ್ಟೇ ಅಲ್ಲ, 2024ರ ಲೋಕಸಭೆ ಚುನಾವಣೆಯಲ್ಲಿ ತಾನು ಪ್ರಧಾನಿ ಅಭ್ಯರ್ಥಿಯೂ ಅಲ್ಲ ಎಂಬ ಮಾತನ್ನು ಪುನರುಚ್ಚರಿಸಿದ್ದಾರೆ. ಹಾಗೇ, ‘2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳೂ ಒಗ್ಗಟ್ಟಾಗಬೇಕು’ ಎಂದು ಕರೆಕೊಟ್ಟಿದ್ದಾರೆ.

ಅಧಿವೇಶನ ಮುಗಿದು ನಿತೀಶ್​ ಕುಮಾರ್​ ಹೊರಗೆ ಬರುತ್ತಿದ್ದಂತೆ ಅವರನ್ನು ಮಾಧ್ಯಮದವರು ತಡೆದು ಪ್ರಶ್ನೆ ಮಾಡಿದರು. ‘2025ರಲ್ಲಿ ತೇಜಸ್ವಿ ಯಾದವ್​ ನೇತೃತ್ವದಲ್ಲಿ ಚುನಾವಣೆ ಎನ್ನುತ್ತೀರಿ, ಇದು ನಿಜಕ್ಕೂ ಸಾಧ್ಯವಾ?’ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಉತ್ತರಿಸಿದ ನಿತೀಶ್​ ಕುಮಾರ್​ ‘ಖಂಡಿತ ಸಾಧ್ಯವಿದೆ. ನಿಶ್ಚಿತವಾಗಿಯೂ ತೇಜಸ್ವಿ ನಾಯಕತ್ವ ನಿಭಾಯಿಸುತ್ತಾರೆ’ ಎಂದು ಹೇಳಿದ್ದಾರೆ.

ಸಿಎಂ ನಿತೀಶ್​ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಹಣಕಾಸು ಸಚಿವ ವಿಜಯ್​ ಕುಮಾರ್​ ಚೌಧರಿ ‘ನಮಗೆ ಸಿಎಂ ನಿರ್ಧಾರದ ಬಗ್ಗೆ ಯಾವುದೇ ಅಚ್ಚರಿಯೂ ಇಲ್ಲ. ತೇಜಸ್ವಿಯೇ ಬಿಹಾರದ ಮುಂದಿನ ನಾಯಕ ಎಂದು ಅವರು ತೀರ್ಮಾನಿಸಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಾಗೇ ನಿತೀಶ್​ ಕುಮಾರ್​ ಈ ನಿರ್ಧಾರವನ್ನು ಆರ್​ಜೆಡಿ ಖುಷಿಯಿಂದ ಸ್ವಾಗತಿಸಿದೆ. ‘ಬಿಹಾರದಲ್ಲಿ ಮಹಾ ಘಟ್​ ಬಂಧನ್​​ ಮೈತ್ರಿಯ ಮುಂದಿನ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್​ ಎಂದು ನಿತೀಶ್ ಕುಮಾರ್​ ಹೇಳಿದ್ದಾರೆ. ಹೀಗಾಗಿ ನಮ್ಮ ಮುಂದಿನ ರಾಜಕೀಯ ಚಟುವಟಿಕೆಗಳಿಗೆ ಒಂದು ಸ್ಪಷ್ಟತೆ ಸಿಕ್ಕಿದೆ ಎಂದು ಆರ್​ಜೆಡಿ ಹೇಳಿದೆ.

ಇದನ್ನೂ ಓದಿ: Nitish Kumar | ಲೋಕಸಭೆ ಚುನಾವಣೆಯಲ್ಲಿ ಉ.ಪ್ರದಿಂದ ಸ್ಪರ್ಧೆ? ನಿತೀಶ್‌ ಕುಮಾರ್‌ ಕೊಟ್ಟ ಸ್ಪಷ್ಟನೆ ಏನು?

Exit mobile version