ನವದೆಹಲಿ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ ಅವರ ಸಂಬಂಧಿಕರ ಮನೆಯಲ್ಲಿ ಇ.ಡಿ ಅಧಿಕಾರಿಗಳಿಗೆ ಬಗೆದಷ್ಟೂ ಹಣ ಸಿಗುತ್ತಿದೆ. ತೇಜಸ್ವಿ ಯಾದವ್ ಸೇರಿ ಅವರ ಸಂಬಂಧಿಕರ ಮನೆಗಳಲ್ಲಿ ಇ.ಡಿ ಅಧಿಕಾರಿಗಳು ದಾಖಲೆ ಇಲ್ಲದ 1 ಕೋಟಿ ರೂ. ನಗದು ಹಾಗೂ ಕ್ರಿಮಿನಲ್ ಚಟುವಟಿಕೆಗಳ ಮೂಲಕ ಗಳಿಸಿದ 600 ಕೋಟಿ ರೂ. ಅಕ್ರಮ ಆಸ್ತಿ (Proceeds Of Crime) ಪತ್ತೆಯಾಗಿದೆ. ಈ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಉದ್ಯೋಗಕ್ಕಾಗಿ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿ (Land For Job Case) ನಡೆಸಿದೆ.
ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, ಪುತ್ರಿಯರಾದ ರಾಗಿಣಿ, ಚಂದಾ, ಹೇಮಾ ಯಾದವ್, ರಾಗಿಣಿ ಪತಿ ಜಿತೇಂದ್ರ ಯಾದವ್ ಹಾಗೂ ಲಾಲು ಆಪ್ತ ಅಬು ದೊಜಾನ ಅವರಿಗೆ ಸೇರಿದ ನಿವಾಸ, ಕಚೇರಿ ಸೇರಿ 24 ಕಡೆ ಇ.ಡಿ ದಾಳಿ ನಡೆಸಿದೆ. ರಾಷ್ಟ್ರ ರಾಜಧಾನಿ ಪ್ರದೇಶ (NCR), ದೆಹಲಿ, ಪಟನಾ, ಮುಂಬೈ ಸೇರಿ ಹಲವು ನಗರಗಳಲ್ಲಿ ಇ.ಡಿ ದಾಳಿ ನಡೆಸಿದೆ. ಇದೇ ವೇಳೆ ಕೋಟ್ಯಂತರ ರೂ. ನಗದು ಹಾಗೂ ಅಕ್ರಮ ಆಸ್ತಿ ಪತ್ತೆಯಾಗಿದೆ.
4 ಲಕ್ಷ ರೂ. ಕೊಟ್ಟು 150 ಕೋಟಿ ರೂ. ಮೌಲ್ಯದ ಮನೆ ಖರೀದಿ
ತೇಜಸ್ವಿ ಯಾದವ್ ಅವರು ದೆಹಲಿಯಲ್ಲಿ ಖರೀದಿಸಿರುವ ಐಷಾರಾಮಿ ನಿವಾಸದ ಮಾರುಕಟ್ಟೆ ಮೌಲ್ಯ 150 ಕೋಟಿ ರೂಪಾಯಿ ಇದೆ. ಆದರೆ, ಈ ನಿವಾಸವನ್ನು ಯಾದವ್ ಅವರು ಕೇವಲ 4 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ತೇಜಸ್ವಿ ಯಾದವ್ ಅವರು ನಾಲ್ಕು ಮಹಡಿಯ ಮನೆ ಖರೀದಿಸಿದ್ದು, ಇದರ ಮೇಲೂ ದಾಳಿ ನಡೆದಿದೆ.
ಲಾಲು ಪ್ರಸಾದ್ ಯಾದವ್ ಅವರು 2004-09ರ ಅವಧಿಯ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಸಂಬಂಧಿಕರು ಸೇರಿ ಹಲವರಿಂದ ಕಡಿಮೆ ಹಣಕ್ಕೆ ಜಮೀನು ಖರೀದಿಸಿದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಈಗಾಗಲೇ ಲಾಲು ಪ್ರಸಾದ್ ಯಾದವ್ ಅವರನ್ನೂ ವಿಚಾರಣೆ ನಡೆಸಲಾಗಿದೆ. ತೇಜಸ್ವಿ ಯಾದವ್ ಅವರಿಗೆ ಸಿಬಿಐ ಕೂಡ ಸಮನ್ಸ್ ಜಾರಿ ಮಾಡಿದೆ.
ಇದನ್ನೂ ಓದಿ: Land For Job Case: ತೇಜಸ್ವಿ ಯಾದವ್, ಸಂಬಂಧಿಕರ ನಿವಾಸದಲ್ಲಿ 70 ಲಕ್ಷ ರೂ., 1.5 ಕೆ.ಜಿ ಚಿನ್ನ ಪತ್ತೆ