Site icon Vistara News

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

Tejasvi Surya

Tejasvi Surya nominates Yuva Morcha vice president to debate against Rahul Gandhi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜತೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ರಾಹುಲ್‌ ಗಾಂಧಿ (Rahul Gandhi) ಎಸೆದ ಸವಾಲಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಪಾಟಿಸವಾಲು ಎಸೆದಿದ್ದಾರೆ. “ರಾಹುಲ್‌ ಗಾಂಧಿಯವರೇ, ನೀವು ಬಿಜೆಪಿಯು ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ್‌ ಪ್ರಕಾಶ್‌ ಅವರೊಂದಿಗೆ ಚರ್ಚೆಗೆ ಬನ್ನಿ” ಎಂದು ಸವಾಲು ಎಸೆಯುವ ಜತೆಗೆ ರಾಹುಲ್‌ ಗಾಂಧಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

“ರಾಹುಲ್‌ ಗಾಂಧಿ ಅವರೇ, ನಮ್ಮ ಅಭಿನವ್‌ ಪ್ರಕಾಶ್‌ ಅವರು ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿದ್ದಾರೆ. ಇವರು ಪಾಸಿ (ಎಸ್‌ಸಿ-ದಲಿತ) ಸಮುದಾಯದ ಪ್ರಮುಖ ನಾಯಕರಾಗಿದ್ದು, ಉನ್ನತ ಶಿಕ್ಷಣ ಪಡೆದಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ರಾಯ್‌ಬರೇಲಿಯಲ್ಲಿ ಈ ಸಮುದಾಯದ ಶೇ.30ರಷ್ಟು ಜನರಿದ್ದಾರೆ. ರಾಜಕೀಯ ಕುಡಿ (ರಾಹುಲ್‌ ಗಾಂಧಿ) ಹಾಗೂ ಸಾಮಾನ್ಯ ಯುವಕನ (ಅಭಿನವ್‌ ಪ್ರಕಾಶ್)‌ ಮಧ್ಯೆ ಒಂದೊಳ್ಳೆ ಚರ್ಚೆ ನಡೆಯಲಿ. ನೀವು ಚರ್ಚೆಯ ಆಹ್ವಾನವನ್ನು ಸ್ವೀಕರಿಸುತ್ತೀರಿ ಎಂಬುದಾಗಿ ಭಾವಿಸಿದ್ದೇನೆ” ಎಂದು ತೇಜಸ್ವಿ ಸೂರ್ಯ ಪೋಸ್ಟ್‌ ಮಾಡಿದ್ದಾರೆ.

ನಾನು ರೆಡಿ ಎಂದ ಅಭಿನವ್‌ ಪ್ರಕಾಶ್‌

ತೇಜಸ್ವಿ ಸೂರ್ಯ ಅವರು ಪ್ರಸ್ತಾಪಿಸುತ್ತಲೇ ಅಭಿನವ್‌ ಪ್ರಕಾಶ್‌ ಅವರು ಚರ್ಚೆಗೆ ನಾನು ಸಿದ್ಧ ಎಂದಿದ್ದಾರೆ. “ರಾಹುಲ್‌ ಗಾಂಧಿ ವಿರುದ್ಧ ಚರ್ಚಿಸಲು ನನ್ನ ಹೆಸರು ಪ್ರಸ್ತಾಪಿಸಿದ್ದಕ್ಕೆ ಮೊದಲಿಗೆ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ರಾಹುಲ್‌ ಗಾಂಧಿ ಹಾಗೂ ಅವರ ಕುಟುಂಬಸ್ಥರು ದೀರ್ಘಾವಧಿಗೆ ಪ್ರತಿನಿಧಿಸಿದ ಉತ್ತರ ಪ್ರದೇಶದ ನಾಗರಿಕ ನಾನು. ಅಮೇಥಿಯಿಂದ ದೂರ ಸರಿದಂತೆ ರಾಹುಲ್‌ ಗಾಂಧಿ ಅವರು ಈ ಚರ್ಚೆಯಿಂದಲೂ ಓಡಿ ಹೋಗುವುದಿಲ್ಲ ಎಂಬುದಾಗಿ ಭಾವಿಸಿದ್ದೇನೆ. ಇಲ್ಲದಿದ್ದರೆ ಅವರ ರಾಯ್‌ಬರೇಲಿಯಿಂದಲೂ ಓಡಿಹೋಗಬೇಕಾಗುತ್ತದೆ” ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

“ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ನೂರಕ್ಕೆ ನೂರರಷ್ಟು ಸಿದ್ಧನಿದ್ದೇನೆ” ಎಂಬುದಾಗಿ ಕೆಲ ದಿನಗಳ ಹಿಂದೆ ರಾಹುಲ್‌ ಗಾಂಧಿ ಹೇಳಿದ್ದರು. ಇದಕ್ಕೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ. ಯಾವ ಸಾಮರ್ಥ್ಯ ಇದೆ ಎಂದು ನೀವು ಮೋದಿ ಅವರನ್ನು ಚರ್ಚೆಗೆ ಕರೆಯುತ್ತಿದ್ದೀರಿ ಎಂದಿದ್ದರು. ಬಿಜೆಪಿಯ ಹಲವು ನಾಯಕರು ಟೀಕಿಸುತ್ತ, ನೀವೇನು ಪ್ರಧಾನಿ ಅಭ್ಯರ್ಥಿಯೇ ಎಂದು ಕುಟುಕಿದ್ದರು. “ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರ ಜತೆ ಒಮ್ಮೆಗೆ ಚರ್ಚೆಗೆ ಬನ್ನಿ” ಎಂದು ಸ್ಮೃತಿ ಇರಾನಿ ಸವಾಲು ಎಸೆದಿದ್ದರು.

ಇದನ್ನೂ ಓದಿ: Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Exit mobile version