ಪಟನಾ: ಬಿಹಾರ ಪ್ರವಾಸದಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬುಧವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರನ್ನು ಭೇಟಿ ಮಾಡಿದರು. ಈ ರಾಜಕೀಯ ಪ್ರಮುಖರ ಭೇಟಿ ವೇಳೆ ಬಿಜೆಪಿ ಮುಕ್ತ ಭಾರತ ವಿಚಾರ ಚರ್ಚೆಯಾಗಿದೆ ಎಂದು ಹೇಳಲಾಗಿದೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಸಿಆರ್, ಈ ದೇಶದಲ್ಲಿ ಅನಾರೋಗ್ಯ ವಾತಾವರಣ ಸೃಷ್ಟಿ ಆಗಿರುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರವೇ ಕಾರಣ. ಬಿಜೆಪಿಯಿಂದಲೇ ದೇಶಕ್ಕೆ ವ್ಯಾಧಿ ಎಂದು ವಾಗ್ದಾಳಿ ನಡೆಸಿದರು. ಹಾಗೇ, ನಿರುದ್ಯೋಗ, ಬೆಲೆ ಹೆಚ್ಚಳದ ವಿರುದ್ಧ ಕಿಡಿಕಾರಿ, ಬಿಜೆಪಿ ಮುಕ್ತ ಭಾರತಕ್ಕೆ ಕರೆ ನೀಡಿದರು.
ಕೆ.ಚಂದ್ರಶೇಖರ್ ರಾವ್ ಬಿಹಾರಕ್ಕೆ ತೆರಳಿದ್ದು ಬೇರೆಯದ್ದೇ ಕಾರಣಕ್ಕೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ದಾಳಿಯಲ್ಲಿ ಮೃತರಾದ ಬಿಹಾರದ ಯೋಧರ ಕುಟುಮಂಬಕ್ಕೆ ತಲಾ 10 ಲಕ್ಷ ರೂಪಾಯಿ ಚೆಕ್ ನೀಡಲು. ಆದರೆ ಇದೊಂದು ರಾಜಕೀಯ ಭೇಟಿಯಾಗಿ ತಿರುಗಿತು. ಗಲ್ವಾನ್ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೆಸಿಆರ್ ಪರಿಹಾರ ಘೋಷಿಸುವಾಗ ಕೆಸಿಆರ್ ಇನ್ನೂ ಎನ್ಡಿಎ ಒಕ್ಕೂಟದಲ್ಲೇ ಇದ್ದರು. ಆಗ ನಿತೀಶ್ ಕುಮಾರ್ ಕೂಡ, ಕೆಸಿಆರ್ಗೆ ರಾಜಕೀಯ ಶತ್ರುವೇ ಆಗಿದ್ದರು. ಈಗ ನಿತೀಶ್ ಬಿಜೆಪಿ ಮೈತ್ರಿ ಕಳಚಿಕೊಂಡಿದ್ದರಿಂದ ಪ್ರತಿಪಕ್ಷಗಳ ಗುಂಪಿಗೆ ಸೇರಿದಂತಾಗಿದೆ.
ಕೆ.ಚಂದ್ರಶೇಖರ್ ರಾವ್ ಸುದ್ದಿಗೋಷ್ಠಿ ನಡೆಸುವಾಗ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಕೂಡ ಉಪಸ್ಥಿತರಿದ್ದರು. ಇದೇ ವೇಳೆ ನಿತೀಶ್ ಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ‘2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲೊಡ್ಡಬಲ್ಲಷ್ಟು ಸಾಮರ್ಥ್ಯ ನಿತೀಶ್ ಕುಮಾರ್ಗೆ ಇದೆ. ನಮ್ಮ ದೇಶದ ಅತ್ಯಂತ ಹಿರಿಯ ಮತ್ತು ಉನ್ನತ ನಾಯಕರಲ್ಲಿ ನಿತೀಶ್ ಜೀ ಕೂಡ ಒಬ್ಬರು. ಮುಂದಿನ ಚುನಾವಣೆ ಹೊತ್ತಿಗೆ ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗಬೇಕೋ, ಬೇಡವೋ ಎಂಬುದನ್ನು ನಾನೊಬ್ಬನೇ ನಿರ್ಧರಿಸಲು ಸಾಧ್ಯವಿಲ್ಲ. ನಾವೆಲ್ಲ ಪ್ರತಿಪಕ್ಷಗಳು ಒಟ್ಟಾಗಿ ಕುಳಿತು ನಿರ್ಧರಿಸಬೇಕು’ ಎಂದು ಹೇಳಿದರು.
ಬಿಹಾರಕ್ಕೆ ತೆರಳಿದ ಕೆ.ಚಂದ್ರಶೇಖರ್ ರಾವ್ ಲಾಲೂ ಪ್ರಸಾದ್ ಯಾದವ್ರನ್ನೂ ಭೇಟಿಯಾದರು. ಅಷ್ಟೇ ಅಲ್ಲ, ಇದೇ ವರ್ಷ ಹೈದರಾಬಾದ್ ಕಾರ್ಖಾನೆಯೊಂದರ ಅಗ್ನಿದುರಂತದಲ್ಲಿ ಮೃತಪಟ್ಟ ಬಿಹಾರದ 12 ಕೂಲಿ ಕಾರ್ಮಿಕರ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿ ಚೆಕ್ ವಿತರಿಸಿದರು. ಹೀಗೆ ಕೆಸಿಆರ್, ಬಿಹಾರಕ್ಕೆ ಬಂದು ನಿತೀಶ್ ಕುಮಾರ್, ತೇಜಸ್ವಿ ಯಾದವ್ರನ್ನು ಭೇಟಿಯಾಗಿದ್ದು ಒಂದು ಕಾಮಿಡಿ ಶೋ ಎಂದು ಬಿಜೆಪಿ ರಾಜ್ಯ ಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: CBI | ತನಿಖೆ ಕೈಗೊಳ್ಳಲು ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ ಪಡೆದ ಬಿಹಾರ ಸರ್ಕಾರ