ಹೈದರಾಬಾದ್: ತೆಲಂಗಾಣದಲ್ಲಿ ಇಂದು ಮತ್ತು ನಾಳೆ (ಜು.2-3) ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇಸರಿ ಕಲರವ ಶುರುವಾಗಿದೆ. ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿರುವ ಜೆಪಿ ನಡ್ಡಾ, ನಗರದಲ್ಲಿ ಬೃಹತ್ ಮಟ್ಟದ ಜಾಥಾ ನಡೆಸಿದ್ದರು. ಹಾಗೇ, ಇಂದು ಸಂಜೆ ಆಗಮಿಸಲಿರುವ ಪ್ರಧಾನಿ ಮೋದಿ ಜುಲೈ 3ರಂದು ರ‍್ಯಾಲಿ ನಡೆಸುವರು. ಇಷ್ಟೆಲ್ಲದರ ಮಧ್ಯೆ ತೆಲಂಗಾಣ ಸಿಎಂ ಕೆಸಿಆರ್ ತಮ್ಮ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾರನ್ನು ಅವರು ರಾಜ್ಯಕ್ಕೆ ಕರೆಸಿದ್ದು, ಅವರಿಗೆ ಬೆಂಬಲ ತೋರಿಸಲು ದೊಡ್ಡಮಟ್ಟದಲ್ಲಿ ರ‍್ಯಾಲಿ ಆಯೋಜಿಸಿದ್ದಾರೆ. ಈಗಾಗಲೇ ಹೈದರಾಬಾದ್ ಬೇಗಮ್‌ಪೇಟ್ ಏರ್‌ಪೋರ್ಟ್‌ಗೆ ಬಂದಿಳಿದ ಅವರನ್ನು ಕೆಸಿಆರ್ ಸ್ವತಃ ಹೋಗಿ ಹೂಗುಚ್ಛ ಕೊಟ್ಟು ಸ್ವಾಗತಿಸಿದ್ದಾರೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ತೆಲಂಗಾಣಕ್ಕೆ ಆಗಮಿಸಲಿದ್ದಾರೆ. ಅವರೂ ಸಹ ಇದೇ ಬೇಗಂಪೇಟ್ ಏರ್‌ಪೋರ್ಟ್‌ಗೆ ಬಂದಿಳಿಯಲಿದ್ದಾರೆ. ಆದರೆ ಅವರನ್ನು ಬರಮಾಡಿಕೊಳ್ಳಲು ಕೆ.ಚಂದ್ರಶೇಖರ್ ರಾವ್ ಏರ್‌ಪೋರ್ಟ್‌ಗೆ ಹೋಗುತ್ತಿಲ್ಲ. ಇವರ ಬದಲು ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಪ್ರಧಾನಿ ಸ್ವಾಗತಕ್ಕೆ ತೆರಳುವರು. ಯಾವುದೇ ರಾಜ್ಯಕ್ಕೆ ಪ್ರಧಾನಮಂತ್ರಿ ಯಾವುದೇ ಕಾರಣಕ್ಕೆ ಬಂದರೂ ಅಲ್ಲಿನ ಮುಖ್ಯಮಂತ್ರಿ ಏರ್‌ಪೋರ್ಟ್‌ಗೆ ತೆರಳಿ ಅವರನ್ನು ಸ್ವಾಗತಿಸುವುದು ಶಿಷ್ಟಾಚಾರ. ಆದರೆ ಈ ಶಿಷ್ಟಾಚಾರವನ್ನು ಕೆಸಿಆರ್ ಆರು ತಿಂಗಳಲ್ಲಿ, ಇದು ಮೂರನೇ ಬಾರಿಗೆ ಉಲ್ಲಂಘನೆ ಮಾಡುತ್ತಿದ್ದಾರೆ.
ಕೆ.ಚಂದ್ರಶೇಖರ್ ರಾವ್ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಪದೇಪದೆ ಟೀಕಿಸುತ್ತಿದ್ದಾರೆ. ಕೇಂದ್ರ ಯಾವುದೇ ಯೋಜನೆ ತಂದರೂ ಅದನ್ನವರು ಒಪ್ಪುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್‌ಗೆ ಬಂದರೆ ಅವರನ್ನು ಸ್ವಾಗತಿಸಲೂ ಹೋಗುತ್ತಿಲ್ಲ. 2022ರ ಫೆಬ್ರವರಿಯಲ್ಲಿ ನರೇಂದ್ರ ಮೋದಿ, ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಸಮಾನತೆ ಮೂರ್ತಿಯನ್ನು ಉದ್ಘಾಟನೆ ಮಾಡಲು ತೆರಳಿದ್ದರು. ಆಗಲೂ ಸಹ ಕೆ.ಚಂದ್ರಶೇಖರ್ ರಾವ್ ಏರ್‌ಪೋರ್ಟ್‌ಗೆ ಹೋಗಿರಲಿಲ್ಲ. ಅದೇ ರೀತಿ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB)ನ 20ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ಹೋಗಿದ್ದರು. ಆದರೆ ಆಗ ಕೆ.ಚಂದ್ರಶೇಖರ್ ರಾವ್ ಅವರು ರಾಜ್ಯದಲ್ಲಿರದೆ ಬೆಂಗಳೂರಿಗೆ ಬಂದಿದ್ದರು. ಈ ಮೂಲಕ ಸ್ವಾಗತಿಸಲು ಏರ್‌ಪೋರ್ಟ್‌ಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕಾರಿಣಿಗೆ ಕೆಸಿಆರ್ ಕೌಂಟರ್; ಬಲ ಪ್ರದರ್ಶನಕ್ಕಾಗಿ ಯಶವಂತ್ ಸಿನ್ಹಾರನ್ನು ಕರೆಸಿದ ಸಿಎಂ