ತೆಲಂಗಾಣ: ಇಲ್ಲಿನ ಮುಖ್ಯಮಂತ್ರಿ, ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರೀಗ ಹೊಸದಾದ ಪಕ್ಷವೊಂದರ (KCR New Party) ಮೂಲಕ ರಾಷ್ಟ್ರರಾಜಕಾರಣಕ್ಕೆ ಪ್ರವೇಶ ಮಾಡುವ ಸಿದ್ಧತೆಯಲ್ಲಿದ್ದಾರೆ. ʼಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಯಾರೊಬ್ಬರೂ ಸುಖವಾಗಿಲ್ಲ. ಈ ದೇಶದಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಲು ನಾನು ರಾಷ್ಟ್ರೀಯ ಪಕ್ಷವೊಂದನ್ನು ಸ್ಥಾಪಿಸಲೂ ಹಿಂಜರಿಯುವುದಿಲ್ಲ. ಆದರೆ ಜನರು ನಮ್ಮ ಮೇಲೆ ನಂಬಿಕೆಯಿಟ್ಟು, ಬೆಂಬಲ ನೀಡಬೇಕುʼ ಎಂದು ಈಗೆರಡು ತಿಂಗಳ ಹಿಂದೆ ಹೇಳಿದ್ದ ಕೆಸಿಆರ್, ಈಗೊಂದು ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.
ಈಗಾಗಲೇ ತೆಲಂಗಾಣ ರಾಷ್ಟ್ರೀಯ ಸಮಿತಿ ಎಂಬ ಪ್ರಾದೇಶಿಕ ಪಕ್ಷದ ಮೂಲಕ ರಾಜ್ಯ ರಾಜಕಾರಣದಲ್ಲಿ ಯಶಸ್ಸು ಗಳಿಸಿ, ಮುಖ್ಯಮಂತ್ರಿ ಪಟ್ಟಕ್ಕೇರಿರುವ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷಕ್ಕೆ ಭಾರತ್ ರಾಷ್ಟ್ರೀಯ ಸಮಿತಿ (BRS), ಜೈ ಭಾರತ್ ಅಥವಾ ನವಭಾರತ್ ಪಾರ್ಟಿ ಎಂದು ಹೆಸರಿಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕೆ.ಚಂದ್ರಶೇಖರ್ ರಾವ್ ಶುಕ್ರವಾರ ಸಂಜೆ ಪ್ರಗತಿ ಭವನದಲ್ಲಿ ತಮ್ಮ ಪಕ್ಷದ ಶಾಸಕರು, ಸಂಸದರು ಮತ್ತು ಪ್ರಮುಖ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ಜುಲೈ 18ಕ್ಕೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಸಂಬಂಧ ಹಲವು ಮಹತ್ವದ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಿವೆ. ಇದೇ ಹೊತ್ತಲ್ಲಿ ಕೆಸಿಆರ್ ತಮ್ಮ ಹೊಸ ರಾಷ್ಟ್ರೀಯ ಪಕ್ಷ ರಚನೆ ಬಗ್ಗೆಯೂ ಪ್ರಸ್ತಾಪವನ್ನಿಟ್ಟಿದ್ದು, ಅದಕ್ಕೆ ಟಿಆರ್‌ಎಸ್‌ನ ಪ್ರತಿಯೊಬ್ಬರೂ ಅನುಮೋದನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಜೂ.19ಕ್ಕೂ ಮೊದಲು ಟಿಆರ್‌ಎಸ್ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ, ರಾಷ್ಟ್ರೀಯ ಪಕ್ಷಕ್ಕೆ ಸಂಬಂಧಪಟ್ಟಂತೆ ಕೆಸಿಆರ್ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಇನ್ನು ಕೆಸಿಆರ್ ಅವರದ್ದೊಂದು ಪದ್ಧತಿಯಿದೆ. ಅವರು ಹೊಸದಾಗಿ ಏನೇ ಮಾಡುವುದಿದ್ದರೂ ದಸರಾದಂದೇ ಮುಹೂರ್ತ ಇಟ್ಟುಕೊಳ್ಳುತ್ತಾರೆ. ಹಾಗೊಮ್ಮೆ ರಾಷ್ಟ್ರೀಯ ಪಕ್ಷ ರಚನೆಯಾಗುವುದೇ ಆದರೆ ಅದೂ ಕೂಡ ದಸರಾ ಹಬ್ಬದಂದೇ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ ಎಂದೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದನ್ನೂ ಓದಿ: ವಿಜಯದಶಮಿ ಹೊತ್ತಿಗೆ BJPಗೆ ಪರ್ಯಾಯ ಶಕ್ತಿ: ದೇವೇಗೌಡರ ಜತೆ ತೆಲಂಗಾಣ ಸಿಎಂ ಮಾತುಕತೆ
2019ರ ಲೋಕಸಭೆ ಚುನಾವಣೆ ವೇಳೆಗೇ ಒಮ್ಮೆ ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ ಕೆ.ಚಂದ್ರಶೇಖರ್ ರಾವ್‌ಗೆ ಹಿನ್ನಡೆಯಾಗಿತ್ತು. ಆದರೆ 2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ರಾಷ್ಟ್ರರಾಜಕಾರಣಕ್ಕೆ ಧುಮುಕಲು ಈಗಾಗಲೇ ಕಸರತ್ತು ಶುರುವಿಟ್ಟುಕೊಂಡಿದ್ದಾರೆ. ಎಲ್ಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರನ್ನೂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿಗೂ ಬಂದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತ, ʼನಾನು ಇನ್ನು ಕೆಲವೇ ದಿನಗಳಲ್ಲಿ ಸೆನ್ಸೇಶನಲ್ ಸುದ್ದಿ ಕೊಡಲಿದ್ದೇನೆʼ ಎಂದು ಹೇಳಿದ್ದರು. ಆಗಿನಿಂದಲೇ ಒಂದು ಕೂತೂಹಲ ಸೃಷ್ಟಿಯಾಗಿತ್ತು. ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಕೆಸಿಆರ್, ತಮ್ಮ ಪಕ್ಷವನ್ನು ಇತರ ರಾಜ್ಯಳಿಗೆ ವಿಸ್ತರಿಸಲಿದ್ದಾರಾ ಅಥವಾ ಹೊಸ ರಾಷ್ಟ್ರೀಯ ಪಕ್ಷ ಕಟ್ಟಲಿದ್ದಾರಾ? ಎಂಬ ಚರ್ಚೆಯೂ ಶುರುವಾಗಿತ್ತು. ಸದ್ಯ ಈ ಕುತೂಹಲಕ್ಕೆ ಸಣ್ಣಮಟ್ಟಿಗಿನ ಸ್ಪಷ್ಟನೆ ಸಿಕ್ಕಂತಾಗಿದೆ. ಅಧಿಕೃತವಾಗಿ ಘೋಷಣೆ ಬಾಕಿ ಇದೆ.
ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ, ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ದೂರು ದಾಖಲು