ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಗೆಲುವು ಸಾಧಿಸಲು ಭಾರತ್ ರಾಷ್ಟ್ರ ಸಮಿತಿ (BRS), ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ (Telangana Election 2023) ಶುರುವಾಗಿದೆ. ಅದರಲ್ಲೂ, ಕರ್ನಾಟಕದಲ್ಲಿ ಐದು ಉಚಿತ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಕಾರಣ ಈಗ ತೆಲಂಗಾಣದಲ್ಲೂ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಅದರಲ್ಲೂ, ವಧುವಿಗೆ 10 ಗ್ರಾಂ ಚಿನ್ನ, ಒಂದು ಲಕ್ಷ ರೂ. ನಗದು ಗಿಫ್ಟ್ ಭಾರಿ ಗಮನ ಸೆಳೆದಿವೆ.
“ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಗ್ಯಾರಂಟಿ ಅಡಿಯಲ್ಲಿ ಮದುವೆಯಾಗುವ ವಧುವಿಗೆ 10 ಗ್ರಾಂ ಚಿನ್ನ ನೀಡಲಾಗುತ್ತದೆ. ಹಾಗೆಯೇ, 1 ಲಕ್ಷ ರೂ. ನಗದು ಕೊಡಲಾಗುತ್ತದೆ. ಇದರ ಜತೆಗೆ ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ” ಎಂದು ತೆಲಂಗಾಣ ಪ್ರಾದೇಶಿಕ ಕಾಂಗ್ರೆಸ್ ಸಮಿತಿ (TPCC) ಡಿ. ಶ್ರೀಧರ್ ಬಾಬು ಮಾಹಿತಿ ನೀಡಿದ್ದಾರೆ. ಹಾಗೆಯೇ, ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್‌ನೆಟ್ ಸೇವೆ ಒದಗಿಸುವ, ಉಚಿತವಾಗಿ ವಿದ್ಯುತ್ ನೀಡವ ಕುರಿತು ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಪಿಎಲ್ ಕುಟುಂಬಗಳಿಗೆ ಉಚಿತ 5 ಲಕ್ಷ ರೂ. ವಿಮೆ, ಎಲ್ಲರಿಗೂ 400 ರೂ.ಗೆ ಸಿಲಿಂಡರ್! ಬಿಆರ್‌ಎಸ್ ಪ್ರಣಾಳಿಕೆ
ಕೆಸಿಆರ್ ನೀಡಿದ ಭರವಸೆಗಳೇನು?
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಕೂಡ ಚುನಾವಣೆ ಹಿನ್ನೆಲೆಯಲ್ಲಿ ಬಿಆರ್‌ಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ 5 ಲಕ್ಷದವರೆಗೂ ಉಚಿತ ವಿಮೆ, ರೈತ ಬಂಧು ಯೋಜನೆಯಡಿಯ ಸಹಾಯ ಧನ ಮೊತ್ತ 10 ಸಾವಿರ ರೂ.ನಿಂದ 16 ಸಾವಿರ ರೂ.ಗೆ ಏರಿಕೆ, 400 ರೂ.ಗೆ ಗ್ಯಾಸ್ ಸಿಲಿಂಡರ್ ಸೇರಿದಂತೆ ಅನೇಕ ಜನಪ್ರಿಯ ಕೊಡುಗೆಗಳನ್ನು ತೆಲಂಗಾಣ ವಿಧಾನಸಭೆ ಚುನಾವಣೆಗೆ ಭಾರತ್ ರಾಷ್ಟ್ರ ಸಮಿತಿ ನೀಡಲು ಮುಂದಾಗಿದೆ. ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಆರ್‌ಎಸ್ ಭರ್ಜರಿ ಉಚಿತ ಯೋಜನೆಗಳನ್ನು ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ಕೂಡ ಭರ್ಜರಿ ಗ್ಯಾರಂಟಿಗಳ ಮೂಲಕ ಜನರ ಮತ ಸೆಳೆಯಲು ಮುಂದಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಟ್ಟ ಕಾಂಗ್ರೆಸ್; ಯಾರಿಗೆಲ್ಲ ಟಿಕೆಟ್?
ತೆಲಂಗಾಣದಲ್ಲಿ 55 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿರುವ ಕಾಂಗ್ರೆಸ್, ಪಕ್ಷದ ರಾಜ್ಯಾಧ್ಯಕ್ಷ ಅನುಮುಲ ರೇವಂತ್ ರೆಡ್ಡಿ ಅವರು ಕೊಡಂಗಲ್, ಉತ್ತಮ್ ಕುಮಾರ್ ಅವರು ಹುಜೂರ್‌ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಮುಳುಗು ಕ್ಷೇತ್ರದಿಂದ ದಸರಿ ಸೀತಕ್ಕ, ಮೇದಕ್ ಕ್ಷೇತ್ರದಿಂದ ಮೈನಂಪಳ್ಳಿ ರೋಹಿತ್ ರಾವ್ ಕಣಕ್ಕಿಳಿದಿದ್ದಾರೆ. ರಾಜ್ಯದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ.
ಭಾರತ್ ರಾಷ್ಟ್ರ ಸಮಿತಿ (ಮೊದಲಿನ ಟಿಆರ್‌ಎಸ್)ಯ ಕೆ.ಚಂದ್ರಶೇಖರ್ ರಾವ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಹೆಸರು ಸಂಪಾದಿಸಿರುವ ಇವರನ್ನು ಮಣಿಸಲು ಬಿಜೆಪಿ ಇನ್ನಿಲ್ಲದ ತಂತ್ರ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನೂ ಮೀರಿ ಬಿಜೆಪಿಗೆ ಬೆಂಬಲ ಸಿಗುವುದು ಕಷ್ಟಸಾಧ್ಯ. ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸುವುದು ಕಷ್ಟ ಸಾಧ್ಯ ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.