ಹೈದ್ರಾಬಾದ್: ಕೇಂದ್ರ ಸರ್ಕಾರದ ಜತೆಗೆ ಸದಾ ಸಂಘರ್ಷದಲ್ಲಿರುವ ತೆಲಂಗಾಣ ಸರ್ಕಾರವು ಇದೀಗ, ರಾಜಭವನ ವಿರುದ್ಧ ಜಟಾಪಟಿ ನಡೆಸುತ್ತಿರುವ ಮಾಹಿತಿ ಹೊರ ಬಿದ್ದಿದೆ. ಸ್ವತಃ ರಾಜ್ಯಪಾಲೆ (Telangana Governor) ಡಾ. ತಮಿಳಿಸಾಯಿ ಸುಂದರರಾಜನ್ ಅವರು ಮಾಹಿತಿ ನೀಡಿದ್ದು, ರಾಜಭವನವನ್ನು ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜಭವನದಲ್ಲಿ ಆಯೋಜಿಸಲಾಗಿದ್ದ ತೆಲಂಗಾಣ ಜನರ ಸೇವೆಯಲ್ಲಿ ನಾಲ್ಕನೇ ವರ್ಷ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಸುಂದರರಾಜನ್ ಅವರು, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಟೀಕೆ ಮಾಡಿದರು.
ಧ್ವಜಾರೋಹಣಕ್ಕೆ ಅವಕಾಶ ನೀಡಲಿಲ್ಲ
ಗಣರಾಜ್ಯೋತ್ಸವದ ವೇಳೆ ರಾಜ್ಯಪಾಲರಿಗೆ ಭಾಷಣ ಮಾಡಲು ಅವಕಾಶ ನೀಡಲಿಲ್ಲ, ಧ್ವಜಾರೋಹಣಕ್ಕೂ ಅವಕಾಶವಿರಲಿಲ್ಲ. ಈಗಲೂ ನಾನು ಎಲ್ಲೇ ಹೋದರೂ ಶಿಷ್ಟಾಚಾರ ಪಾಲನೆಯಾಗುವುದಿಲ್ಲ. ರಾಜಭವನದ ಗೌರವವನ್ನು ಹಾಳು ಮಾಡಬಾರದು ಎಂದು ಅವರು ತಿಳಿಸಿದರು.
ಹೆಲಿಕಾಪ್ಟರ್ ಕೊಡಲಿಲ್ಲ
ಇತ್ತೀಚೆಗೆ ನಾನು ಮುಲುಗು ಜಿಲ್ಲೆಯಲ್ಲಿ ನಡೆಯುವ ಸಮ್ಮಕ್ಕಾ ಸರಕ್ಕಾ(ಜಾತ್ರೆ)ಗೆ ಹೋಗಬೇಕಿತ್ತು. ರಸ್ತೆ ಮೂಲಕ ಹೋಗಬೇಕಿದ್ದರೆ 8 ಗಂಟೆ ಬೇಕಾಗುತ್ತಿತ್ತು. ಹಾಗಾಗಿ, ಹೆಲಿಕಾಪ್ಟರ್ ನೀಡುವಂತೆ ಸರ್ಕಾರಕ್ಕೆ ಕೇಳಿಕೊಂಡೆ. ಆದರೆ, ಕೊನೆ ಗಳಿಗೆಯವರೆಗೂ ಹೆಲಿಕಾಪ್ಟರ್ ನೀಡುತ್ತಿಲ್ಲ ಎಂಬ ಮಾಹಿತಿಯನ್ನು ಕೊಡಲಿಲ್ಲ. ಮಾರನೇ ದಿನ ಬೆಳಗ್ಗೆ ನಾವು ಕಾರ್ ಮೂಲಕ ಹೋಗಬೇಕಾಯಿತು ಎಂದು ತಿಳಿಸಿದರು.
ಇತ್ತೀಚೆಗೆ ದಕ್ಷಿಣ ಭಾರತದ ಝೋನಲ್ ಮೀಟಿಂಗ್ ನಡೆದಿತ್ತು. ನಾನು ಇದರಲ್ಲಿ ಭಾಗವಹಿಸಿದ್ದೆ. ಪುದುಚೆರಿ ಲೆಫ್ಟಿನೆಂಟ್ ಗೌವರ್ನರ್ ಕೂಡ ಭಾಗವಹಿಸಿದ್ದರು. ಇಲ್ಲಿ ಚರ್ಚೆಯಾದ ಸಮಸ್ಯೆಗಳ ಪೈಕಿ ಶೇ.75ರಷ್ಟು ಸಮಸ್ಯೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶಗಳದ್ದಾಗಿತ್ತು. ಎಲ್ಲ ಮುಖ್ಯಮಂತ್ರಿಗಳು ಅಲ್ಲಿದ್ದರು. ಮುಖ್ಯಮಂತ್ರಿ ಕೆಸಿಆರ್ ಅವರು ಯಾಕೆ ಪಾಲ್ಗೊಂಡಿರಲಿಲ್ಲ. ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಕೇಂದ್ರ ಗೃಹ ಸಚಿವರೇ ಅಲ್ಲಿದ್ದರು, ಹಾಗಿರುವಾಗ ನೀವು(ಕೆಸಿಆರ್) ಭಾಗವಹಿಸದಿರಲು ಕಾರಣಗಳೇನು ಎಂದು ಪ್ರಶ್ನಿಸಿದರು.
ದುಸ್ಥಿತಿಯಲ್ಲಿ ಆಸ್ಪತ್ರೆಗಳು
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ದುಸ್ಥಿತಿಯಲ್ಲಿವೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ. ಒಂದು ವೇಳೆ, ಅವರು(ರಾಜಕಾರಣಿಗಳು) ತಮ್ಮ ಕೆಲಸವನ್ನು ಸರಿಯಾಗಿ ಮಾಡಿದ್ದರೆ ಮತ್ತು ಎಲ್ಲ ಜನಪ್ರತಿನಿಧಿಗಳು ಜನರಿಗೆ ಕೈ ಸಿಗುವಂತೆ ಇದ್ದಿದ್ದರೆ, ಅವರು ಏಕೆ ತಮ್ಮ ಸಮಸ್ಯೆಗಳೊಂದಿಗೆ ನನ್ನ ಬಳಿ ಯಾಕೆ ಬರುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ರಾಜಭವನದಿಂದ ಆಯೋಜಿಸಲಾಗುವ ಯಾವುದೇ ಕಾರ್ಯಕ್ರಮದಲ್ಲಿ ಚುನಾಯಿತ ಉನ್ನತ ಹುದ್ದೆಯಲ್ಲಿ ಇರುವವರು ಪಾಲ್ಗೊಳ್ಳುವುದಿಲ್ಲ. ಆ ಬಗ್ಗೆ ಕನಿಷ್ಠ ಅವರ ಕಚೇರಿಗಳು ಮಾಹಿತಿಯನ್ನೂ ನೀಡುವುದಿಲ್ಲ. ಶಿಷ್ಟಾಚಾರ ಪಾಲನೆಯಾಗಬೇಕು. ಯಾಕೆಂದರೆ, ಇದೆಲ್ಲವೂ ತೆಲಂಗಾಣದ ಇತಿಹಾಸದಲ್ಲಿ ದಾಖಲಾಗಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ | ವಿಮಾನ ಪ್ರಯಾಣಿಕರಿಗೆ ಗಂಭೀರ ಅನಾರೋಗ್ಯ, ಡಾಕ್ಟರ್ ಆದ ತೆಲಂಗಾಣ ಗವರ್ನರ್ !