Site icon Vistara News

ವಿಮಾನ ಪ್ರಯಾಣಿಕರಿಗೆ ಗಂಭೀರ ಅನಾರೋಗ್ಯ, ಡಾಕ್ಟರ್‌ ಆದ ತೆಲಂಗಾಣ ಗವರ್ನರ್‌ !

telangana governor

ನವ ದೆಹಲಿ: ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿದ ವಿಮಾನ ಪ್ರಯಾಣಿಕರೊಬ್ಬರಿಗೆ ರಾಜ್ಯಪಾಲರೊಬ್ಬರು ತುರ್ತು ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ ಹೃದಯಸ್ಪರ್ಶಿ ಘಟನೆ ಶನಿವಾರ ನಡೆದಿದೆ.

ದೆಹಲಿ – ಹೈದರಾಬಾದ್ ನಡುವೆ ಸಂಚರಿಸುವ ಇಂಡಿಗೋ ವಿಮಾನ ಶನಿವಾರ ವಿಶೇಷ ಘಟನೆಗೆ ಸಾಕ್ಷಿಯಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತೀವ್ರ ಆರೋಗ್ಯ ಸಮಸ್ಯೆಗೆ ತುತ್ತಾದರು. ತಕ್ಷಣವೇ ಕ್ಯಾಬಿನ್ ಸಿಬ್ಬಂದಿ ಪೈಲೆಟ್‌ಗೆ ಮಾಹಿತಿ ನೀಡಿದರು. ಅವರು ವಿಮಾನದಲ್ಲಿ ಪ್ರಯಾಣಿಕರೊಬ್ಬರ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ, ವೈದ್ಯರ ನೆರವಿನ ಅಗತ್ಯವಿದೆ ಎಂದು ಘೋಷಣೆ ಮಾಡಿದರು.

ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಕೂಡ ವಿಮಾನದಲ್ಲಿದ್ದರು. ಸೌಂದರರಾಜನ್ ವಾರಣಾಸಿಯಿಂದ ದೆಹಲಿ ಮಾರ್ಗವಾಗಿ ಹೈದರಾಬಾದ್‌ಗೆ ಆಗಮಿಸುತ್ತಿದ್ದರು. ಅವರು ಕೂಡಲೇ ಪ್ರಯಾಣಿಕರ ನೆರವಿಗೆ ಧಾವಿಸಿ, ತುರ್ತು ಚಿಕಿತ್ಸೆ ಒದಗಿಸಿದರು. ವಿಮಾನದಲ್ಲಿದ್ದ ವೈದ್ಯಕೀಯ ಸಲಕರಣೆಗಳಿಂದ ರಾಜ್ಯಪಾಲರು ಪ್ರಯಾಣಿಕನ ಪಲ್ಸ್, ಬಿಪಿ ಪರೀಕ್ಷಿಸಿದರು. ಸೂಕ್ತ ಔಷಧಿ ನೀಡಿದ ಕೆಲ ಹೊತ್ತಲ್ಲೇ ಪ್ರಯಾಣಿಕ ಚೇತರಿಸಿಕೊಂಡರು.

ರಾಜ್ಯಪಾಲೆ ಸೌಂದರರಾಜನ್ ರಾಜಕೀಯ ಪ್ರವೇಶಕ್ಕೂ ಮೊದಲು ವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು.

ʻʻರಾಜ್ಯಪಾಲರನ್ನು ಪ್ರಯಾಣಿಕರನ್ನಾಗಿ ಹೊಂದಿದ್ದುದು ನಮ್ಮ ಸುಯೋಗ. ನಮ್ಮ ಸೂಪರ್‌ಹೀರೋಗಳಿಗೆ ನಾವು ಸದಾ ಸೆಲ್ಯೂಟ್‌ ಮಾಡುತ್ತೇವೆ ಹಾಗೂ ಅವರ ನಿಸ್ವಾರ್ಥ ಸೇವೆಗೆ ನಮ್ಮ ಶ್ಲಾಘನೆಗಳು ಸಾಲವುʼʼ ಎಂದು ಇಂಡಿಗೋ ಕಂಪನಿ ಟ್ವೀಟ್‌ ಮಾಡಿ ತಮಿಳಿಸೈ ಅವರಿಗೆ ಗೌರವ ಸಲ್ಲಿಸಿದೆ.

ತಮಿಳಿಸೈ ಅವರು ಕೂಡ ಇಂಡಿಗೋ ವಿಮಾನ ಸಿಬ್ಬಂದಿಯ ಸಮಯಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ದಾರಲ್ಲದೆ, ಎಲ್ಲ ವಿಮಾನ ಸಿಬ್ಬಂದಿಗೂ ತುರ್ತು ಆರೋಗ್ಯ ಚಿಕಿತ್ಸೆಯ ಕೆಲವು ತರಬೇತಿಗಳನ್ನು ನೀಡಬೇಕು ಎಂದು ಸೂಚಿಸಿದ್ದಾರೆ. ಇದನ್ನು ಅವರು ಟ್ವೀಟ್‌ ಮಾಡಿದ್ದಾರೆ. ‌

ಇದನ್ನೂ ಓದಿ: ತಮ್ಮ 600 ಕೋಟಿ ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಿದ ಉದ್ಯಮಿ; ಆ ಒಂದು ಘಟನೆ ಕಾರಣ

Exit mobile version