ಹೈದರಾಬಾದ್: ಲೋಕಸಭೆ ಚುನಾವಣೆಗೆ (Lok Sabha Election 2024) ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿವೆ. ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ, ಚುನಾವಣಾ ರಣತಂತ್ರ ಸೇರಿ ಹಲವು ರೀತಿಯಲ್ಲಿ ಚುನಾವಣೆಗೆ ಸನ್ನದ್ಧವಾಗುತ್ತಿವೆ. ಇನ್ನು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ, ಟಿಕೆಟ್ ಸಿಗುವ ಆಸೆಯಿಂದ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಇದರ ಬೆನ್ನಲ್ಲೇ, ತೆಲಂಗಾಣ ರಾಜ್ಯಪಾಲೆ (Telangana Governor) ತಮಿಳಿಸಾಯಿ ಸುಂದರರಾಜನ್ (Tamilisai Soundararajan) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ತಮಿಳಿಸಾಯಿ ಸುಂದರರಾಜನ್ ಅವರು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕೂಡ ಆಗಿದ್ದಾರೆ. ಇವರು 2021ರಿಂದಲೂ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ. ಈಗ ತೆಲಂಗಾಣ ರಾಜ್ಯಪಾಲೆ ಹಾಗೂ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ.
Tamilisai Soundararajan resigns from the post of Telangana Governor and Puducherry Lieutenant Governor: Raj Bhavan Puducherry
— ANI (@ANI) March 18, 2024
(file pic) pic.twitter.com/UjdyEKdPBx
ದಕ್ಷಿಣ ಚೆನ್ನೈನಿಂದ ಸ್ಪರ್ಧೆ?
ತಮಿಳಿಸಾಯಿ ಸುಂದರರಾಜನ್ ಅವರು ತಮಿಳುನಾಡು ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷೆಯೂ ಆಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಇವರು ದಕ್ಷಿಣ ಚೆನ್ನೈ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು 2019ರ ಸೆಪ್ಟೆಂಬರ್‌ನಲ್ಲಿ ತೆಲಂಗಾಣ ರಾಜ್ಯಪಾಲೆಯಾಗಿ ನೇಮಕಗೊಂಡಿದ್ದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಪಡಿಸುವ ದಿಸೆಯಲ್ಲಿ ಬಿಜೆಪಿಯು ಹಲವು ಪ್ರಯತ್ನ ಮಾಡುತ್ತಿದ್ದು, ತಮಿಳಿಸಾಯಿ ಸುಂದರರಾಜನ್ ಅವರನ್ನು ಕೂಡ ಇದೇ ದೃಷ್ಟಿಯಿಂದ ಲೋಕಸಭೆ ಕಣಕ್ಕೆ ಇಳಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದುವರೆಗೆ ಎರಡು ಬಾರಿ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಮಿಳಿಸಾಯಿ, ಒಮ್ಮೆಯೂ ಗೆಲುವು ಸಾಧಿಸಿಲ್ಲ. ಈಗ ಮತ್ತೊಮ್ಮೆ ಅವರಿಗೆ ಬಿಜೆಪಿ ಟಿಕೆಟ್ ನೀಡಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?
ಕೆಲ ದಿನಗಳ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಫೆಬ್ರವರಿಯಲ್ಲಷ್ಟೇ ಮೇಲ್ಮನೆಗೆ ಆಯ್ಕೆಯಾಗಿದ್ದ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಕೂಡ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ