Site icon Vistara News

ಎಬಿವಿಪಿ ಸದಸ್ಯೆಯ ಕೂದಲು ಹಿಡಿದು ಸ್ಕೂಟರ್‌ನಲ್ಲಿ ಎಳೆದ ಮಹಿಳಾ ಪೊಲೀಸರು; ವಿಡಿಯೊ ಇಲ್ಲಿದೆ

Police Women

Telangana Policewoman on Scooter Drags ABVP Student By Hair; BJP Demands Action

ಹೈದರಾಬಾದ್:‌ ಪೊಲೀಸರು ದೇಶದ ಆಂತರಿಕ ಸೈನಿಕರು ಎಂದು ಹೇಳಲಾಗುತ್ತದೆ. ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಕೊಡಿಸುವುದು, ನಾಗರಿಕರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗದಂತೆ ನೋಡಿಕೊಳ್ಳುವುದು, ಅನ್ಯಾಯ ಎಸಗಿದವರಿಗೆ ಶಿಕ್ಷೆ ಕೊಡಿಸುವುದು ಪೊಲೀಸರ ಕರ್ತವ್ಯಗಳಾಗಿವೆ. ಆದರೆ, ತೆಲಂಗಾಣದಲ್ಲಿ ಮಹಿಳಾ ಪೊಲೀಸರೊಬ್ಬರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಸದಸ್ಯೆಯ ಕೂದಲು ಹಿಡಿದು, ಸ್ಕೂಟರ್‌ ಮೇಲೆ ಕೂತು ಎಳೆಯುವ ಮೂಲಕ ಪೊಲೀಸರೇ ದೌರ್ಜನ್ಯ ಎಸಗುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡಿದ್ದಾರೆ. ಯುವತಿಯ ಕೂದಲು ಹಿಡಿದು ಎಳೆದಿರುವ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಎಬಿವಿಪಿ ಕಾರ್ಯಕರ್ತರು, ಕಾರ್ಯಕರ್ತೆಯರು ಕೂಡ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಪೊಲೀಸರು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಇದೇ ವೇಳೆ ಎಬಿವಿಪಿ ಸದಸ್ಯೆಯೊಬ್ಬರು ಸ್ವಲ್ಪ ದೂರ ಓಡಿದ್ದಾರೆ. ಆಗ, ಸ್ಕೂಟರ್‌ ಮೇಲೆ ಕುಳಿತ ಇಬ್ಬರು ಮಹಿಳಾ ಪೊಲೀಸರಲ್ಲಿ ಒಬ್ಬರು ವಿದ್ಯಾರ್ಥಿನಿಯ ಕೂದಲು ಹಿಡಿದು ಎಳೆದಿದ್ದಾರೆ. ಮತ್ತೊಬ್ಬ ಪೊಲೀಸ್‌ ಅಧಿಕಾರಿಯು ಸ್ಕೂಟರ್‌ ಚಲಾಯಿಸುತ್ತಿದ್ದ ಕಾರಣ ಎಬಿವಿಪಿ ಸದಸ್ಯೆ ಕೆಳಗೆ ಬಿದ್ದಿದ್ದಾರೆ. ಇದು ಈಗ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ.

ಬಿಜೆಪಿ, ಬಿಆರ್‌ಎಸ್‌ ಆಕ್ರೋಶ

ಎಬಿವಿಪಿ ಸದಸ್ಯೆಯ ಕೂದಲು ಹಿಡಿದು ಎಳೆದ ವಿಡಿಯೊ ವೈರಲ್‌ ಆಗುತ್ತಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಬಿಆರ್‌ಎಸ್‌ ಆಕ್ರೋಶ ವ್ಯಕ್ತಪಡಿಸಿವೆ. “ಘಟನೆಯನ್ನು ಬಿಜೆಪಿ ಖಂಡಿಸುತ್ತದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಧ್ಯಪ್ರವೇಶಿಸಿ ಕ್ರಮ ತೆಗೆದುಕೊಳ್ಳಬೇಕು” ಎಂದು ತೆಲಂಗಾಣ ಬಿಜೆಪಿ ಉಪಾಧ್ಯಕ್ಷ ವಿಷ್ಣುವರ್ಧನ್‌ ರೆಡ್ಡಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಕೂಡ ತೆಲಂಗಾಣ ಪೊಲೀಸರ ವರ್ತಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Road Rage Case: ಕಾರಿನ ಬಾನೆಟ್‌ ಮೇಲೆ ಕ್ಯಾಬ್‌ ಡ್ರೈವರ್‌ನ 400 ಮೀ. ಎಳೆದೊಯ್ದ ವ್ಯಕ್ತಿ!

ಬಿಆರ್‌ಎಸ್‌ ನಾಯಕಿ ಕವಿತಾ ರಾವ್‌ ಅವರು ಕೂಡ ದೌರ್ಜನ್ಯದ ವಿಡಿಯೊ ಹಂಚಿಕೊಂಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. “ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯ ಕೂದಲು ಹಿಡಿದು, ಎಳೆದುಕೊಂಡು ಹೋಗಿರುವುದು ಸರಿಯಲ್ಲ. ಕೂಡಲೇ ತೆಲಂಗಾಣ ಪೊಲೀಸರು ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ. ತೆಲಂಗಾಣದಲ್ಲಿ ಹೊಸ ಹೈಕೋರ್ಟ್‌ ಕಾಂಪ್ಲೆಕ್ಸ್‌ ನಿರ್ಮಿಸಲು ರಾಜ್ಯ ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್‌ ಜಯಶಂಕರ್‌ ಅವರ ಜಾಗವನ್ನು ನೀಡಿರುವ ರೇವಂತ್‌ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version