ಹೈದರಾಬಾದ್: ಪ್ರತಿಪಕ್ಷಗಳ ನಾಯಕರು, ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜಕೀಯ ವಿರೋಧಿಗಳನ್ನು ಹಣಿಯಲು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಕುರಿತು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ತೆಲಂಗಾಣ ಸರ್ಕಾರವು ರಾಜ್ಯದಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (CBI) ನೀಡಿದ್ದ ‘ಮುಕ್ತ ಸಮ್ಮತಿ’ಯನ್ನು (General Consent To CBI) ಹಿಂಪಡೆಯುವ ಮೂಲಕ ಕೇಂದ್ರಕ್ಕೆ ಸೆಡ್ಡೊಡೆದಿದೆ.
ತೆಲಂಗಾಣದಲ್ಲಿ ಬಿಜೆಪಿಯು ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜುಲ ಪ್ರೇಮೇಂದರ್ ರೆಡ್ಡಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ವೇಳೆ ತೆಲಂಗಾಣ ಸರ್ಕಾರವು ಮುಕ್ತ ಸಮ್ಮತಿ ವಾಪಸ್ ಪಡೆದಿರುವ ಕುರಿತು ಕೋರ್ಟ್‌ಗೆ ಮಾಹಿತಿ ನೀಡಿದೆ.
ಯಾವುದೇ ರಾಜ್ಯವು ಮುಕ್ತ ಸಮ್ಮತಿ ನೀಡಿರುವ ಪ್ರಕಾರ, ಆ ರಾಜ್ಯ ಸರ್ಕಾರದ ಅನುಮತಿ ಇಲ್ಲಿದೆ ಸಿಬಿಐ ತನಿಖೆ ಕೈಗೊಳ್ಳಬಹುದಾಗಿದೆ. ಆದರೆ, ಈಗ ತೆಲಂಗಾಣ ಸರ್ಕಾರವು ಮುಕ್ತ ಸಮ್ಮತಿಯನ್ನು ವಾಪಸ್ ಪಡೆದಿರುವ ಕಾರಣ, ತನಿಖೆಗೆ ಸಿಬಿಐ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಒಂಬತ್ತನೇ ರಾಜ್ಯ ತೆಲಂಗಾಣ
ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಇದುವರೆಗೆ ಎಂಟು ರಾಜ್ಯಗಳು ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ವಾಪಸ್ ಪಡೆದಿದ್ದವು. ಈಗ ಇವುಗಳ ಸಾಲಿಗೆ ತೆಲಂಗಾಣವೂ ಸೇರಿದ್ದು, ಸಮ್ಮತಿ ಹಿಂಪಡೆದ ಒಂಬತ್ತನೇ ರಾಜ್ಯ ಎನಿಸಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಪಂಜಾಬ್, ಮೇಘಾಲಯ ಸೇರಿ ದೇಶದ ಒಂಬತ್ತು ರಾಜ್ಯಗಳಲ್ಲಿ ಸಿಬಿಐಗೆ ನೀಡಲಾಗಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ | Operation TRS MLAs | ತೆಲಂಗಾಣದಲ್ಲಿ ಟಿಆರ್‌ಎಸ್‌ನ 4 ಶಾಸಕರ ಖರೀದಿಗೆ 150 ಕೋಟಿ ರೂ. ಆಫರ್, ಯಾವ ಪಕ್ಷ ಸಾರಥಿ?