Site icon Vistara News

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

Saffron Row

Telangana School Attacked After Students Questioned Over Saffron Attire

ಹೈದರಾಬಾದ್:‌ ಕರ್ನಾಟಕ ಸೇರಿ ದೇಶದ ಹಲವೆಡೆ ಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ (Hijab Row) ಧರಿಸಿ ತರಗತಿಗೆ ಹಾಜರಾಗುವ ಕುರಿತು ಆಗಾಗ ವಿವಾದ ಭುಗಿಲೇಳುತ್ತದೆ. ಕರ್ನಾಟಕದ ವಿವಾದವಂತೂ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ, ತೆಲಂಗಾಣದ (Telangana) ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕೇಸರಿ ದಿರಸು ಧರಿಸಿ ತರಗತಿಗೆ ಹಾಜರಾಗಿರುವುದಕ್ಕೆ ಶಾಲೆಯ ಪ್ರಾಂಶುಪಾಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ, ಹಿಂದು ಕಾರ್ಯಕರ್ತರು ಶಾಲೆಯ ಮೇಲೆ ದಾಳಿ ಮಾಡಿದ್ದು, ಕಲ್ಲುತೂರಾಟ ಕೂಡ ನಡೆದಿದೆ.

ಕನ್ನೆಪಳ್ಳಿ ಎಂಬ ಗ್ರಾಮದಲ್ಲಿರುವ ಬ್ಲೆಸ್ಡ್‌ ಮದರ್‌ ತೆರೆಸಾ ಹೈ ಸ್ಕೂಲ್‌ನಲ್ಲಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಧರಿಸಿ ತರಗತಿಗಳಿಗೆ ಆಗಮಿಸಿದ್ದಾರೆ. ಇದೇ ವೇಳೆ, ಶಾಲೆಯ ಪ್ರಾಂಶುಪಾಲ, ಕೇರಳದ ಮೂಲದ ಜೈಮೊನ್‌ ಜೋಸೆಫ್‌ ಅವರು ವಿದ್ಯಾರ್ಥಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ತಂದೆ-ತಾಯಿಯನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಗದರಿದ್ದಾರೆ. ಹನುಮಾನ್‌ ದೀಕ್ಷೆ ಇರುವ ಕಾರಣ 21 ದಿನ ಕೇಸರಿ ಬಟ್ಟೆ ಧರಿಸುವುದು ಸಂಪ್ರದಾಯ ಎಂದರೂ ಕೇಳದೆ ಪ್ರಾಂಶುಪಾಲ ಗದರಿದ್ದಾರೆ.

ಶಾಲೆಯಲ್ಲಿ ಯಾವಾಗ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಹಾಕಿಕೊಂಡು ಬಂದಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ ವ್ಯಕ್ತಪಡಿಸಿದ ಸುದ್ದಿ ಹರಡಿತೋ, ಹಿಂದು ಸಂಘಟನೆಗಳ ಕಾರ್ಯಕರ್ತರು ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ. ಶಾಲೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಲ್ಲದೆ, ಕಿಟಕಿಯ ಗಾಜುಗಳನ್ನೂ ಒಡೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮತ್ತೊಂದೆಡೆ, ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಸಿಬ್ಬಂದಿ ಜತೆಗೂ ಹಿಂದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ಶಾಲೆಯ ಇಬ್ಬರು ಸಿಬ್ಬಂದಿ ವಿರುದ್ಧ ಕೇಸ್‌

ಕೇಸರಿ ಉಡುಪು ಧರಿಸಿ ಬರಬೇಡಿ ಎಂಬುದಾಗಿ ಶಾಲೆಯ ಆಡಳಿತ ಮಂಡಳಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಶಾಲೆಯ ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಮೇರೆಗೆ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಎರಡು ಸಮುದಾಯಗಳ ಮಧ್ಯೆ ವೈಷಮ್ಯ ಬಿತ್ತಿರುವುದು ಸೇರಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಾಂಶುಪಾಲರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Hijab Ban : ಶಾಲೆಗಳಲ್ಲಿ ಹಿಜಾಬ್​ ನಿಷೇಧಕ್ಕೆ ಆಗ್ರಹಿಸಿ ಸತ್ಯಾಗ್ರಹ ಶುರು ಮಾಡಿದ ಮಸ್ಲಿಮ್ ವಿದ್ಯಾರ್ಥಿನಿ ​

Exit mobile version