Site icon Vistara News

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rohith Vemula

Telangana Top Cop Orders Further Probe Into Rohith Vemula Death Case

ಹೈದರಾಬಾದ್:‌ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ (Central University) ಹಾಸ್ಟೆಲ್‌ನಲ್ಲಿ ಪಿಎಚ್‌.ಡಿ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರೋಹಿತ್‌ ವೇಮುಲ (Rohith Vemula) ದಲಿತನಲ್ಲ, ಆತನ ನಿಜವಾದ ಜಾತಿ ಬಯಲಾಗುತ್ತದೆ ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಪ್ರಕರಣವನ್ನು ಕ್ಲೋಸ್‌ ಮಾಡಿರುವ ತೆಲಂಗಾಣ ಪೊಲೀಸರು ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ರೋಹಿತ್‌ ವೇಮುಲ ಸಾವಿನ ಪ್ರಕರಣವು ತೆಲಂಗಾಣ ಸರ್ಕಾರವು (Telangana Government) ಮರು ತನಿಖೆಗೆ ಆದೇಶಿಸಿದೆ.

2016ರ ಜನವರಿಯಲ್ಲಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಪ್ರಕರಣವನ್ನು ತೆಲಂಗಾಣ ಪೊಲೀಸರು ಈಗ ಕ್ಲೋಸ್‌ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಆಗ ಸಿಕಂದರಾಬಾದ್‌ ಸಂಸದರಾಗಿದ್ದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್‌ ಸದಸ್ಯ ಎನ್‌. ರಾಮಚಂದರ್‌ ರಾವ್‌, ವಿವಿ ಕುಲಪತಿ ಅಪ್ಪಾ ರಾವ್‌, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಹಲವು ಎಬಿವಿಪಿ ನಾಯಕರಿಗೂ ತೆಲಂಗಾಣ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ.

ರೋಹಿತ್‌ ವೇಮುಲ ಸಾವಿನ ಕುರಿತು ಮತ್ತೆ ತನಿಖೆ ನಡೆಸಲು ತೆಲಂಗಾಣ ಪೊಲೀಸ್‌ ಮಹಾ ನಿರ್ದೇಶಕ (DGP) ರವಿ ಗುಪ್ತಾ ಆದೇಶಿಸಿದ್ದಾರೆ. ಕೇಸ್‌ ಕ್ಲೋಸ್‌ ಮಾಡಿರುವ ಕುರಿತು ಪೊಲೀಸರು ಸಲ್ಲಿಸಿದ ವರದಿ ಕುರಿತು ರೋಹಿತ್‌ ವೇಮುಲನ ತಾಯಿ ಹಾಗೂ ಸಹೋದರನು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಮತ್ತೆ ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್‌ ಅನುಮತಿಗೆ ಮನವಿಯನ್ನೂ ಸಲ್ಲಿಸಲಾಗಿದೆ.

ವರದಿಯಲ್ಲಿ ಏನಿದೆ?

“ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ವಿವಿ ಕ್ಯಾಂಪಸ್‌ನಲ್ಲಿ ಆತನ ರಾಜಕೀಯ ಚಟುವಟಿಕೆಗಳು, ಅಧ್ಯಯನದಲ್ಲಿ ಹಿನ್ನಡೆ ಸೇರಿ ಹಲವು ಕಾರಣಗಳಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಆತ ಓದಿನಲ್ಲಿ ಹಿಂದಿರುತ್ತಾನೆ. ಇಲ್ಲವೇ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು ಕಾರಣವಾಗಿರುತ್ತವೆ. ಇನ್ನು ರೋಹಿತ್‌ ವೇಮುಲ ಪಿಎಚ್‌.ಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ, ಎರಡು ವರ್ಷದ ಬಳಿಕ ಮತ್ತೊಂದು ಪಿಎಚ್‌.ಡಿ ಮಾಡಲು ಮುಂದಾಗಿದ್ದ. ಏಕೆಂದರೆ, ಆತ ಶಿಕ್ಷಣಕ್ಕಿಂತ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆತ ದಲಿತನಲ್ಲ

“ರೋಹಿತ್‌ ವೇಮುಲ ದಲಿತನಲ್ಲ” ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ರೋಹಿತ್‌ ವೇಮುಲ ಪ್ರಮಾಣಪತ್ರಗಳು ನಕಲಿ ಆಗಿವೆ. ಆತನಿಗೆ ತಾಯಿಯು ನಕಲಿ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ತಯಾರಿಸಿ ಕೊಟ್ಟಿದ್ದಾರೆ ಎಂಬುದು ಗೊತಿತ್ತು. ಇದಾದ ಬಳಿಕ ಆತನು ತನ್ನ ಘನತೆಗೆ ಧಕ್ಕೆ ಬರುತ್ತದೆ ಎಂಬುದರ ಚಿಂತೆಯಲ್ಲಿದ್ದ. ನಕಲಿ ಪ್ರಮಾಣಪತ್ರದ ಭೀತಿಯಲ್ಲಿದ್ದ ಆತನು, ಇದುವರೆಗೆ ತಾನು ಗಳಿಸಿದ ಪದವಿಗಳೆಲ್ಲ ಹಾಳಾಗುತ್ತವೆ ಎಂಬ ಚಿಂತೆ ಕಾಡುತ್ತಿತ್ತು. ಇದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂಬುದಾಗಿ ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?

ಹೈದರಾಬಾದ್‌ನಲ್ಲಿರುವ ಸೆಂಟ್ರಲ್‌ ಯುನಿವರ್ಸಿಟಿಯ ಹಾಸ್ಟೆಲ್‌ ಕೋಣೆಯಲ್ಲಿ ರೋಹಿತ್‌ ವೇಮುಲ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನು ದಲಿತನೆಂದು, ವಿಶ್ವವಿದ್ಯಾಲಯದಲ್ಲಿ ದಲಿತ ವಿರೋಧಿ ನೀತಿಗಳು ಇವೆ ಎಂದು, ಕೇಂದ್ರದ ಮೋದಿ ಸರ್ಕಾರವು ದಲಿತ ವಿರೋಧಿ ಎಂದೂ ಪ್ರತಿಭಟನೆ ನಡೆಸಲಾಗಿತ್ತು. ದೆಹಲಿ ಸೇರಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ರೋಹಿತ್‌ ವೇಮುಲ ಆತ್ಮಹತ್ಯೆಗೂ ಮುನ್ನ ಆತನ ಮೇಲೆ ಎಬಿವಿಪಿ ಸದಸ್ಯರು ದಾಳಿ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ದೇಶದಲ್ಲಿ ಅಸಹಿಷ್ಣುತೆ ಇದೆ, ಬಿಜೆಪಿ ಸರ್ಕಾರದ ಬಂದ ಬಳಿಕ ಹೀಗೆಲ್ಲ ಆಗುತ್ತಿದೆ, ದಲಿತ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದೆಲ್ಲ ಹೇಳಲಾಗುತ್ತಿತ್ತು.

ಇದನ್ನೂ ಓದಿ: Rohith Vemula: ರೋಹಿತ್‌ ವೇಮುಲ ದಲಿತನೇ ಅಲ್ಲ ಎಂದ ಪೊಲೀಸರು; ಕೇಸ್‌ ಕ್ಲೋಸ್‌, ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್‌ ಚಿಟ್

Exit mobile version