ತೆಲಂಗಾಣ: ಪೊಲೀಸ್/ ಸೇನೆ/ ಅರೆಸೇನಾ ಹೀಗೆ ರಕ್ಷಣಾ ಕ್ಷೇತ್ರದ ಯಾವುದೇ ಹುದ್ದೆಗೆ ಆಯ್ಕೆಯಾಗಬೇಕು ಎಂದರೆ ಶಿಕ್ಷಣದ ಜತೆ, ದೈಹಿಕ ಸದೃಢತೆಯೂ ಮುಖ್ಯ. ಹುದ್ದೆ ಆಕಾಂಕ್ಷಿಗಳ ತೂಕ, ಎತ್ತರ, ಆರೋಗ್ಯಗಳೆಲ್ಲವೂ ಅರ್ಹತೆ ವಿಭಾಗದಲ್ಲಿ ಸೇರ್ಪಡೆಯಾಗುತ್ತವೆ. ಎತ್ತರ-ತೂಕ ಸರಿಯಾಗಿ ಇರಬೇಕು. ಯಾವುದೇ ಒಂದರಲ್ಲಿ ವಿಫಲವಾದರೂ ಈ ಹುದ್ದೆಗಳಿಗೆ ಆಯ್ಕೆಯಾಗುವುದಿಲ್ಲ. ಆದರೆ ತೆಲಂಗಾಣದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆ ಆಕಾಂಕ್ಷಿಯಾಗಿದ್ದ ಯುವತಿಯೊಬ್ಬಳು ಇದರಲ್ಲಿ ಗೋಲ್ಮಾಲ್ ಮಾಡಲು ಹೋಗಿ, ಅನರ್ಹಗೊಂಡಿದ್ದಾಳೆ.
ತೆಲಂಗಾಣದ ಮೆಹಬೂಬ್ನಗರದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಮತ್ತು ಸಬ್ಇನ್ಸ್ಪೆಕ್ಟರ್ಗಳ ನೇಮಕಾತಿಗಾಗಿ, ಆಕಾಂಕ್ಷಿ ಮಹಿಳಾ ಅಭ್ಯರ್ಥಿಗಳ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಯುತ್ತಿತ್ತು. ಪೊಲೀಸ್ ಕಾನ್ಸ್ಟೆಬಲ್ ಹುದ್ದೆ ಆಕಾಂಕ್ಷಿಯಾಗಿದ್ದ ಯುವತಿಯೊಬ್ಬಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಳು. ಈಕೆಯ ಸರದಿ ಬಂತು. ಎತ್ತರವನ್ನು ಅಳೆಯುವ ಎಲೆಕ್ಟ್ರಾನಿಕ್ ಯಂತ್ರದ ಮೇಲೆ ನಿಲ್ಲುವಂತೆ ನಿಲ್ಲುವಂತೆ ಯುವತಿಗೆ ಹೇಳಲಾಯಿತು. ಆಕೆ ನಿಂತರೆ, ಆ ಯಂತ್ರ ಏನನ್ನೂ ತೋರಿಸಲಿಲ್ಲ. ಯುವತಿಯ ಎತ್ತರ ಎಷ್ಟು ಎಂಬುದು ಡಿವೈಸ್ ಮೇಲೆ ಗೋಚರ ಆಗಲಿಲ್ಲ. ಆಗ ಅನುಮಾನ ಬಂದ ಮಹಿಳಾ ಸಿಬ್ಬಂದಿ ಯುವತಿಯ ತಲೆ ಭಾಗವನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅವಳ ತಲೆ ಮೇಲೆ ಎಂ-ಸೀಲ್ ಇರುವುದು ಪತ್ತೆಯಾಗಿದೆ.
ಈ ಎಂ-ಸೀಲ್ ಪ್ರತಿ ಮನೆಯಲ್ಲೂ ಇರುವ ಗಮ್. ಒಡೆದ ಪೈಪ್ಗಳು, ಮುರಿದ ಗಾಜುಗಳನ್ನು ಕೂಡಿಸಲು, ಸೋರುತ್ತಿರುವ ಪಾತ್ರೆಗಳಿಗೆ ಅಂಟಿಸಲು ಬಳಸುತ್ತಾರೆ. ಈ ಯುವತಿ ತಾನು ಕುಳ್ಳಗಿದ್ದೇನೆ. ಎತ್ತರ ಪರೀಕ್ಷೆಯಲ್ಲಿ ವಿಫಲಳಾಗುತ್ತೇನೆ ಎಂದು, ಎಂ-ಸೀಲ್ನ್ನು ತಲೆಗೆ ಅಂಟಿಸಿಕೊಂಡು, ಕೂದಲಿನಂತೆಯೇ ಕಾಣುವಂತೆ ಮಾಡಿಕೊಂಡು ಬಂದಿದ್ದಳು. ಆದರೆ ಮೇಲ್ವಿಚಾರಕರ ಬಳಿ ಸಿಕ್ಕಿಬಿದ್ದು ಅನರ್ಹಗೊಂಡಿದ್ದಾಳೆ.
ಇದನ್ನೂ ಓದಿ: Moral Policing | ಕೂಲಿ ಕಾರ್ಮಿಕನ ಮೇಲೆ ನೈತಿಕ ಪೊಲೀಸ್ ಗಿರಿ; ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು